ಉತ್ತರ ಪ್ರದೇಶದಲ್ಲಿ ಒಬ್ಬನೇ ಒಬ್ಬ ವ್ಯಕ್ತಿಗೆ ಆರು ಕಡೆಗಳಲ್ಲಿ ಸರ್ಕಾರಿ ಹುದ್ದೆ!
ಲಕ್ನೋ: ಒಬ್ಬ ವ್ಯಕ್ತಿ ಏಕ ಕಾಲದಲ್ಲಿ ಬೇರೆ ಬೇರೆ ಆರು ಜಿಲ್ಲೆಗಳಲ್ಲಿ ಆರು ಸರ್ಕಾರಿ ಹುದ್ದೆಗಳನ್ನು ಹೊಂದಿರಲು ಸಾಧ್ಯವೇ? ಉತ್ತರ ಪ್ರದೇಶದ ಆರೋಗ್ಯ ಇಲಾಖೆಯಲ್ಲಿ ಅರ್ಪಿತ್ ಸಿಂಗ್ ಎಂಬ ವ್ಯಕ್ತಿ ಈ ʼವಿಶೇಷ ಸಾಧನೆ' ಮಾಡಿದ್ದಾನೆ.
ಉತ್ತರ ಪ್ರದೇಶ ಸರ್ಕಾರ ಮಾವನ ಸಂಪದ ಪೋರ್ಟೆಲ್ ಮೂಲಕ ದೃಢೀಕರಣ ಅಭಿಯಾನದಲ್ಲಿ ಈ ವಂಚನೆ ಪತ್ತೆಯಾಗಿದೆ. ಒಂದೇ ಹೆಸರು, ತಂದೆಯ ಹೆಸರು ಮತ್ತು ಜನ್ಮದಿನಾಂಕ ಹೊಂದಿರುವುದು ಈ ಅಭಿಯಾನದಲ್ಲಿ ಬಹಿರಂಗವಾಗಿದೆ. ಆರು ಜಿಲ್ಲೆಗಳಲ್ಲಿ ಎಕ್ಸ್‌ರೇ ತಂತ್ರಜ್ಞನಾಗಿ ಕೆಲಸ ಮಾಡುತ್ತಿರುವುದಾಗಿ ಬಿಂಬಿಸಿ ಎಲ್ಲ ಕಡೆಗಳಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಮಾಸಿಕ 69,595 ರೂಪಾಯಿ ವೇತನ ಪಡೆಯುತ್ತಿದ್ದ ಹಗರಣ ಬೆಳಕಿಗೆ ಬಂದಿದೆ.
ನಕಲಿ ಆಧಾರ್ಕಾರ್ಡ್ ಮತ್ತು ತದ್ರೂಪಿ ನೇಮಕಾತಿ ಪತ್ರದ ಸಹಾಯದಿಂದ ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಆರೋಗ್ಯ ಇಲಾಖೆಯಿಂದ 4.5 ಕೋಟಿ ರೂಪಾಯಿ ಲೂಟಿ ಮಾಡಿರುವುದು ಪತ್ತೆಯಾಗಿದೆ.
ಈ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪಿಗಳು ತಲೆ ಮರೆಸಿಕೊಂಡಿರುವುದರಿಂದ ವೇತನವನ್ನು ಮರು ವಸೂಲಿ ಮಾಡಿಕೊಳ್ಳುವುದು ಕಷ್ಟಸಾಧ್ಯ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅವರ ಮನೆಗಳಿಗೆ ಬೀಗ ಜಡಿದಿದ್ದು, ಫೋನ್ ಗಳು ಸ್ವಿಚ್ ಆಫ್ ಆಗಿವೆ. ಈ ಬಗ್ಗೆ ಎಫ್ಐಆರ್ ದಾಖಲಿಸಲಾಗಿದ್ದು, ಈ ವಂಚಕರ ಕೂಟದ ಸಂಚು ಭೇದಿಸುವ ಪ್ರಯತ್ನದಲ್ಲಿ ತನಿಖಾಧಿಕಾರಿಗಳು ಇದ್ದಾರೆ.
ರಾಜ್ಯದ 403 ಎಕ್ಸ್‌ರೇ ತಂತ್ರಜ್ಞ ಹುದ್ದೆಗಳಿಗೆ ಉತ್ತರ ಪ್ರದೇಶದ ಅಧೀನ ಸಿಬ್ಬಂದಿ ಸೇವೆಗಳ ಆಯ್ಕೆ ಆಯೋಗ 2016ರಲ್ಲಿ ನೇಮಕಾತಿ ಮಾಡಿತ್ತು. ಹೀಗೆ ನೇಮಕಗೊಂಡವರಲ್ಲಿ 80ನೇ ಕ್ರಮಸಂಖ್ಯೆಯ ಆಗ್ರಾದ ಅರ್ಪಿತ್ ಸಿಂಗ್ ಕೂಡಾ ಒಬ್ಬ, ಆದಾಗ್ಯೂ ಆ ಬಳಿಕ ಇತರ ಆರು ಜಿಲ್ಲೆಗಳಲ್ಲಿ ಅರ್ಪಿತ್ ಹೆಸರಿನ ಆರು ಮಂದಿ ಸೇವೆಗೆ ಸೇರಿದರು. ಆಗ್ರಾದ ಅರ್ಪಿತ್ ಸಿಂಗ್ ನ ಆಧಾರ್ ಕಾರ್ಡ್ ಮತ್ತು ತದ್ರೂಪಿ ನೇಮಕಾತಿ ಪತ್ರ ಬಳಸಿಕೊಂಡಿರುವುದು ಪತ್ತೆಯಾಗಿದೆ.
ಅರೆ ವೈದ್ಯಕೀಯ ವಿಭಾಗದ ನಿರ್ದೇಶಕ ಡಾ. ರಂಜನಾ ಖಾರೆ ಅವರು ಈ ಸಂಬಂಧ ವಝೀರ್ ಗಂಜ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಕಲಿ ನೇಮಕಾತಿದಾರರು ಬಲರಾಂಪುರ, ಫಾರೂಕಾಬಾದ್, ಬಂದಾ, ಅರ್ಮೋಹ ಮತ್ತು ಶಾಮ್ಲಿ ಜಿಲ್ಲೆಯಲ್ಲಿ ಈ ವಂಚನೆ ಮಾಡಿದ್ದಾಗಿ ಆಪಾದಿಸಲಾಗಿದೆ.