‘ಉಡುಪಿ ಉಚ್ಚಿಲ ದಸರಾ’ದಲ್ಲಿ ಜನಮನ ಸೂರೆಗೊಂಡ 'ನೃತ್ಯ ವೈಭವ' ನೃತ್ಯ ಸ್ಪರ್ಧೆ; 'ಯಕ್ಸ್ಟ್ರೀಮ್ ಡ್ಯಾನ್ಸ್ ಅಕಾಡಮಿ ಉಡುಪಿ' ಪ್ರಥಮ
ಫೋಟೋ: ಸಚಿನ್ ಉಚ್ಚಿಲ
ಉಚ್ಚಿಲ: ಒಂದೆಡೆ ಜನಜಂಗುಳಿ, ಇನ್ನೊಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಅಬ್ಬರ. ಬೆಳಗ್ಗಿನಿಂದ ರಾತ್ರಿ ವರಗೆ ಜನವೋ ಜನ. ಈ ದೃಶ್ಯ ಕಂಡು ಬಂದಿದ್ದು ರವಿವಾರ ‘ಉಡುಪಿ ಉಚ್ಚಿಲ ದಸರಾ’ದಲ್ಲಿ.
ಶ್ರೀಮಹಾಲಕ್ಷ್ಮೀ ದೇವಳದಲ್ಲಿ ನಡೆಯುತ್ತಿರುವ ‘ಉಡುಪಿ ಉಚ್ಚಿಲ ದಸರಾ’ದಲ್ಲಿ ರವಿವಾರ ನಡೆದ ಕುಸ್ತಿ, ಸಾಮೂಹಿಕ ಭಜನಾ ಕುಣಿತ, ನೃತ್ಯ ಸ್ಪರ್ಧೆ ಸೇರಿದಂತೆ ಒಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿದರೆ, ಇನ್ನೊಂದೆಡೆ ಧಾರ್ಮಿಕ ವಿಧಿ ವಿಧಾನಗಳು, ಪೂಜೆಗೆ ಭಕ್ತಾಧಿಗಳ ದಂಡೇ ಹರಿದುಬಂದಿತ್ತು.
ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ನೃತ್ಯ ಸ್ಪರ್ಧೆ 'ನೃತ್ಯ ವೈಭವ'ವಂತೂ ನೆರೆದವರನ್ನು ಮಂತ್ರಮುಗ್ಧರನ್ನಾಗಿಸಿತು. ಒಂದಕ್ಕಿಂತಲೂ ಒಂದು ತಂಡ ತಮ್ಮ ನೃತ್ಯದ ಮೂಲಕ ನೆರೆದವರನ್ನು ಮನರಂಜಿಸಿದರು.
ರಾಜ್ಯ ಮಟ್ಟದ 17 ನೃತ್ಯ ತಂಡಗಳು ಈ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಮೊದಲ ಸ್ಥಾನವನ್ನು 'ಎಕ್ಸ್ಟ್ರೀಮ್ ಡ್ಯಾನ್ಸ್ ಅಕಾಡಮಿ ಉಡುಪಿ', ಎರಡನೇ ಸ್ಥಾನವನ್ನು 'ನಾಟ್ಯ ಸ್ಕೂಲ್ ಆಫ್ ಡ್ಯಾನ್ಸ್ ಕೋಟೇಶ್ವರ', ಮೂರನೇ ಸ್ಥಾನವನ್ನು 'ಲಾನ್ ಮಂಗಳೂರು', ನಾಲ್ಕನೇ ಸ್ಥಾನವನ್ನು ' ಟೀಮ್ ಜ್ಯುನಿಯರ್ ಎಕ್ಸ್ ಉಡುಪಿ' ಪಡೆದುಕೊಂಡಿತು. ಭಾಗವಹಿಸಿದ 14 ತಂಡಗಳಿಗೂ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ತಲಾ ರೂ.10000 ರಂತೆ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು.
ಗಣ್ಯರೆಲ್ಲ ಒಟ್ಟುಗೂಡಿ ವಿಜೇತ ತಂಡಗಳಿಗೆ ಬಹುಮಾನ ನೀಡಿ ಅಭಿನಂದಿಸಿದರು. ಈ ವೇಳೆ ದಸರಾ ರೂವಾರಿ, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಜಿ. ಶಂಕರ್, ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಅಧ್ಯಕ್ಷ ಜಯ ಸಿ.ಸುವರ್ಣ ಬೆಳ್ಳಂಪಳ್ಳಿ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಅಜಿತ್ ಸುವರ್ಣ ಮುಂಬೈ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕಾರ್ಯದರ್ಶಿ ಶರಣ್‌ಕುಮಾರ್ ಮಟ್ಟು, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಶಾಲಿನಿ ಜಿ.ಶಂಕರ್, ಶಾಮಿಲಿ ಜಿ.ಶಂಕರ್, ಶಿಲ್ಪಿ ಶಮಿತ್ ಕುಂದರ್, ಉಷಾರಾಣಿ, ಸಂಧ್ಯಾ ಸುನಿಲ್, ಸುಗುಣ, ಮನೋಜ್ ಉಚ್ಚಿಲ, ದಿನೇಶ್ ಎರ್ಮಾಳ್, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮವನ್ನು ವಿಜೇತ ಶೆಟ್ಟಿ ಹಾಗು ಸಾಹಿಲ್ ರೈ ನಡೆಸಿಕೊಟ್ಟರು.
ಗಮನ ಸೆಳೆದ ಸಾಮೂಹಿಕ ಭಜನಾ ಕುಣಿತ
ಜೊತೆಗೆ ದೇವಸ್ಥಾನದ ರಥಬೀದಿಯ ಸುತ್ತ ಉಡುಪಿ ಮತ್ತು ದ.ಕ. ಜಿಲ್ಲಾ ವ್ಯಾಪ್ತಿಯ ಕುಣಿತ ಭಜನಾ ತಂಡಗಳಿಂದ ಏಕಕಾಲದಲ್ಲಿ ಸಾಮೂಹಿಕ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.










