ಏನೂ ತಪ್ಪು ಮಾಡಿದಿದ್ದರೂ ನಮ್ಮ ಮೇಲೆ ಇಷ್ಟೊಂದು ದ್ವೇಷ-ಆರೋಪಗಳು ಏಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ: ಡಾ.ವೀರೇಂದ್ರ ಹೆಗ್ಗಡೆ

ಏನೂ ತಪ್ಪು ಮಾಡಿದಿದ್ದರೂ ನಮ್ಮ ಮೇಲೆ ಇಷ್ಟೊಂದು ದ್ವೇಷ-ಆರೋಪಗಳು ಏಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ: ಡಾ.ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚಿಸಿದ ರಾಜ್ಯ ಸರ್ಕಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕೃತಜ್ಞತೆ ಸಲ್ಲಿಸಿದ್ದು, ತಪ್ಪು ಮಾಡದಿದ್ದರೂ ನಮ್ಮ ಮೇಲೆ ಯಾಕಿಷ್ಟು ದ್ವೇಷ-ಆರೋಪ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಹರ್ಷೇಂದ್ರ ಕುಮಾರ್ ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ವೀರೇಂದ್ರ ಹೆಗ್ಗಡೆ ಅವರು, ಧರ್ಮಸ್ಥಳ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ, ಇದರಿಂದಾಗಿ ಸತ್ಯ ಹೊರಬರುತ್ತಿದೆ. ನಾನು ಹಲವಾರು ಪುಸ್ತಕಗಳನ್ನು ಓದುತ್ತಿದ್ದೇನೆ. ಸೇವೆ ಮತ್ತು ಧರ್ಮ ನಮ್ಮ ಆದ್ಯತೆ ಎಂದು ಹೇಳಿದ ಸಿದ್ಧಗಂಗಾ ಶ್ರೀಗಳ ಪುಸ್ತಕಗಳನ್ನು ನಾನು ಓದಿದ್ದೇನೆ. ಏನೂ ತಪ್ಪು ಮಾಡಿದಿದ್ದರೂ ನಮ್ಮ ಮೇಲೆ ಇಷ್ಟೊಂದು ದ್ವೇಷ ಮತ್ತು ಆರೋಪಗಳು ಏಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾವು ಸೇವೆಯನ್ನು ನೀಡುತ್ತಿದ್ದೇವೆ ಮತ್ತು ಈ ನಿಸ್ವಾರ್ಥ ಸೇವೆಯೇ ನಮ್ಮನ್ನು ಆರೋಗ್ಯವಾಗಿಟ್ಟಿದೆ. ಧರ್ಮಸ್ಥಳ ಮತ್ತು ಧರ್ಮಸ್ಥಳದ ಗ್ರಾಮಸ್ಥರು ಪ್ರತ್ಯೇಕವಾಗಿಲ್ಲ ಎಂದು ಹೇಳಿದರು.

ಇಷ್ಟು ವರ್ಷ ನಾವು ಆರೋಗ್ಯವಾಗಿರಲು ನಮ್ಮ ನಿಸ್ವಾರ್ಥ ಸೇವೆಯೇ ಕಾರಣ. ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ನೀವು ಎಲ್ಲರೂ ಗಮನಿಸಿದ್ದೀರಿ. ನಾವು ಇಲ್ಲಿ‌ ನಿಮಿತ್ತ ಮಾತ್ರ. ಆದರೆ, ಮುಂದುವರೆಸಿಕೊಂಡು ಹೋಗಿದ್ದು ಅದಕ್ಕೆ ಸಂಬಂಧಪಟ್ಟ ಇಲಾಖೆಯವರು. ಕೆಲವರು ಪ್ರೀತಿಯಲ್ಲಿ ಟೀಕೆ ಮಾಡಿದ್ದರು. ಇವರ ಹಾಗೆ ಟೀಕೆ ಮಾಡಿಲ್ಲ. ನಿಮಗೆ ನಾನು ಎಷ್ಟು ಕೃತಜ್ಞತೆ ಸಲ್ಲಿಸಿದ್ರೂ ಕಡಿಮೆಯೇ. ಧರ್ಮಸ್ಥಳ ಬೇರೆ, ಧರ್ಮಸ್ಥಳದ ಊರಿನವರು ಬೇರೆ ಅಲ್ಲ. ಎಷ್ಟು ನಿಷ್ಠುರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆದಿದೆ ಎಂದು ನೀವು ನೋಡಿದ್ದೀರಿ. ಯಾಕೆ ಇಷ್ಟು ದ್ವೇಷ ನನ್ನ ಮೇಲೆ ಇದೆ ಎಂದು ನನಗೆ ಗೊತ್ತಾಗಿಲ್ಲ. ಈಗ ಮನಸ್ಸು ಸ್ವಲ್ಪ ಹಗುರವಾಗಿದೆ, ಎತ್ತರದ ಬೆಟ್ಟದಿಂದ ನೀರು ಹರಿದಿದೆ ಎಂದು ಭಾವುಕರಾದರು.

ನಮ್ಮ ಮೇಲೆ ದೃಢವಾದ ನಂಬಿಕೆ ಇಟ್ಟ ಎಲ್ಲರಿಗೂ ನಾನು‌ ಆಭಾರಿ. ಈಗಾಗಲೇ ಲಕ್ಷಾಂತರ ಜನರು ಇಲ್ಲಿಗೆ ಬಂದು ಹೋಗಿದ್ದಾರೆ ನಿಮ್ಮ ಧರ್ಮ ಸೋತರೆ, ನಮ್ಮ ಧರ್ಮ ಸೋತ ಹಾಗೆ ಅಂತ ಹೇಳಿದ್ದಾರೆ. ಈ ಶತ್ರುತ್ವ ಯಾಕೆ ಎಂದು ಕೇಳ್ತಾರೆ, ನನಗೂ ಈ ದ್ವೇಷ ಯಾಕೆ ಬೇಕು? ನಾವು ಯಾರನ್ನೂ ಹೀಯಾಳಿಸಿಲ್ಲ. ದ್ವೇಷ ಕೂಡ ಮಾಡಿಲ್ಲ. ನಾವು ತಪ್ಪು ಮಾಡದ ಕಾರಣ ನಮಗೆ ಆತ್ಮವಿಶ್ವಾಸ ಇದೆ. ಬೆಂಗಳೂರು ಆಥವಾ ಎಲ್ಲೋ ಕೂತು ಟೀಕೆ ಮಾಡೋರು ನಮಗೆ ಬೇಡ. ನಮಗೆ ನಮ್ಮವರು ಬೇಕು, ನಮ್ಮ ಜೊತೆ ನಿಲ್ಲೋರು ಬೇಕು. ನಮ್ಮ ಮೇಲೆ ಪ್ರೀತಿ ತೋರಿದ ಎಲ್ಲಾ ಹೆಣ್ಮಕ್ಕಳಿಗೂ ನಾನು ಆಭಾರಿ. ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ನಾವು ಸತ್ಯದ ಹಾದಿಯಲ್ಲಿದ್ದೇವೆ. ಈ ಹಾದಿಯನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು.

Ads on article

Advertise in articles 1

advertising articles 2

Advertise under the article