ವೈಭವದ 'ಉಡುಪಿ ಉಚ್ಚಿಲ ದಸರಾ'ದಲ್ಲಿ ಮೇಳೈಸುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು; 'ಪುದರ್ ದೀತಿಜಿ' ನೋಡಿ ಬಿದ್ದುಬಿದ್ದು ನಕ್ಕ ಜನ!

ವೈಭವದ 'ಉಡುಪಿ ಉಚ್ಚಿಲ ದಸರಾ'ದಲ್ಲಿ ಮೇಳೈಸುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು; 'ಪುದರ್ ದೀತಿಜಿ' ನೋಡಿ ಬಿದ್ದುಬಿದ್ದು ನಕ್ಕ ಜನ!

ಫೋಟೋ: ಸಚಿನ್ ಉಚ್ಚಿಲ 

ಉಚ್ಚಿಲ: ಕರಾವಳಿಯ ನಾಡಹಬ್ಬವೆಂದೇ ಹೇಳಲಾಗುತ್ತಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ 4ನೇ ವರ್ಷದ 'ಉಡುಪಿ ಉಚ್ಚಿಲ ದಸರಾ'ದಲ್ಲಿ ಶುಕ್ರವಾರ ಹತ್ತಲವು ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಕೋಶಾಧಿಕಾರಿ ಸುಧಾಕರ ಕುಂದರ್ ಹಾಗು ಅವರ ಪತ್ನಿ ರೋಶಿನಿ ಅವರು ದೀಪ ಬೆಳಗಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನವದುರ್ಗ ಭಜನಾ ಮಂಡಳಿ ಹೆಜಮಾಡಿ ಅವರಿಂದ ಭಜನಾ ಕಾರ್ಯಕ್ರಮದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಂಡಿತು.





ಇದಕ್ಕೂ ಮೊದಲು ಬೆಳಗ್ಗೆ ಉದಯಪೂಜೆ, ನಿತ್ಯ ಚಂಡಿಕಾ ಹೋಮ, ನವದುರ್ಗೆಯರಿಗೆ ಮಹಾಮಂಗಳಾರತಿ, ಮಹಾಪೂಜೆ, ನವದುರ್ಗೆಯರಿಗೆ ರಾತ್ರಿ ಮಹಾಪೂಜೆ, ಶ್ರೀ ಅಂಬಿಕಾ ಕಟ್ಟೋಕ್ತ ಪೂಜೆ ನಡೆಯಿತು. ಈ ಪೂಜಾ ವಿಧಿವಿಧಾನಗಳಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾದರು.

ಲಲಿತಾ ಪಂಚಮಿ ಆಚರಣೆಯ ವೇಳೆ ಮಹಿಳೆಯರಿಗೆ ಶ್ವೇತವಸ್ತ್ರ ವಿತರಣೆ 

ದೇವಸ್ಥಾನದಲ್ಲಿ ನಡೆದ ಲಲಿರ ಪಂಚಮಿ ಆಚರಣೆಯ ವೇಳೆ ನಡೆದ ಸಾಮೂಹಿಕ ಕುಂಕುಮಾರ್ಚನೆ ಸೇವೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಮಹಿಳೆಯರು ಭಾಗವಹಿಸಿದ್ದರು. ಪೂಜೆಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಶ್ವೇತವಸ್ತ್ರವನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್, ನಾಡೋಜ ಜಿ.ಶಂಕರ್, ಜಯ ಸಿ.ಕೋಟ್ಯಾನ್ ಮೊದಲಾದವರು ಚಾಲನೆ ನೀಡಿದರು.

ಶ್ರೀಮತಿ ಶಾಲಿನಿ ಡಾ.ಜಿ. ಶಂಕರ್ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಳಿಸಿತು. ಖ್ಯಾತ ಗಾಯಕಿ ಕಲಾವತಿ ದಯಾನಂದ್ ಸಾರಥ್ಯದ ಉಡುಪಿ ಕಲಾಸಿಂಧೂ ಸಂಗೀತ ಬಳಗದಿಂದ 'ಭಕ್ತಿ ಗೀತಾಂಜಲಿ' ಸಂಗೀತ ಕಾರ್ಯಕ್ರಮ ನಡೆಯಿತು. 

ಮಂಗಳೂರಿನ ಅನಿಕಾ ಮತ್ತು ಅನುಷ್ಕಾ ಸಹೋದರಿಯಾರಿಂದ 'ಭರತನಾಟ್ಯ' ಪ್ರದರ್ಶನವಾಯಿತು.  ಅನಂತರ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗು ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನೆರವೇರಿತು.












ಮುಂಬೈಯ ಅರುಣೋದಯ ಕಲಾನಿಕೇತನ ತಂಡದ  ಗುರು ಡಾ| ಮೀನಾಕ್ಷಿ ರಾಜು ಶ್ರೀಯಾನ್ ನಿರ್ದೇಶನದಲ್ಲಿ 'ನೃತ್ಯ ವೈವಿಧ್ಯ' ಕಾರ್ಯಕ್ರಮ ಪ್ರದರ್ಶನಗೊಂಡಿತು. 

ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಎಲ್ಲ ಕಲಾವಿದರಿಗೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ.ಜಿ. ಶಂಕರ್, ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್‌ ಪಡುಕರೆ ಸೇರಿದಂತೆ ಮತ್ತಿತರರು ಸ್ಮರಣಿಕೆ, ಶಾಲು ನೀಡಿ ಗೌರವಿಸಿದರು.

ಕೊನೆಗೆ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದ ನಾಟಕ "ಪುದರ್ ದೀತಿಜಿ" ಪ್ರದರ್ಶನಗೊಂಡಿತು. ಹಳೆಯ ನಾಟಕವಾದರೂ ಜನ ಇದರ ಡೈಲಾಗ್'ಗಳನ್ನು ಇನ್ನೂ ಮರೆತಿಲ್ಲ. ಕಿಕ್ಕಿರಿದು ತುಂಬಿದ ಜನಸಂದಣಿಯ  ನಡುವೆ ಈ ನಾಟಕ ಪ್ರದರ್ಶನವಾಯಿತು. ಜನ ನಾಟಕವನ್ನು ಕೊನೆಯ ವರೆಗೂ ನೋಡಿ ಆನಂದಿಸಿದರು. ದೇವದಾಸ್ ಕಾಪಿಕಾಡ್ ಅವರ ಸಂಭಾಷಣೆ, ಹಾಸ್ಯದ ದೃಶ್ಯವನ್ನು ಕಂಡು ಜನ ಬಿದ್ದುಬಿದ್ದು ನಕ್ಕರು. 

Ads on article

Advertise in articles 1

advertising articles 2

Advertise under the article