
ಭಾರತ-ಪಾಕಿಸ್ತಾನ ಕ್ರಿಕೆಟ್ ವಿವಾದ; ʻಕ್ರೀಡೆಗೆ ರಾಜಕೀಯ ತರಬೇಡಿʼ: ಕಪಿಲ್ ದೇವ್ ಪ್ರತಿಕ್ರಿಯೆ!
ದುಬೈ: ರವಿವಾರ ಅಂತ್ಯವಾದ 2025ರ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಸಾಕಷ್ಟು ಹೈಡ್ರಾಮಾ ನಡೆದಿತ್ತು. ಹ್ಯಾಂಡ್ ಶೇಕ್, ಕೈ ಸನ್ನೆ ಸೇರಿದಂತೆ ಹಲವು ಸಂಗತಿಗಳಿಂದ ಹಲವು ವಿವಾದಗಳು ಉಂಟಾಗಿದ್ದವು. ಸೆಪ್ಟಂಬರ್ 28ರಂದು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಏಷ್ಯಾ ಕಪ್ ಫೈನಲ್ ಪಂದ್ಯ ಕೂಡ ಹಲವು ವಿವಾದಗಳಿಗೆ ಕಾರಣವಾಗಿದೆ. ಈ ಬಗ್ಗೆ ಭಾರತ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ಕಪಿಲ್ ದೇವ್ ಪ್ರತಿಕ್ರಿಯೆ ನೀಡಿದ್ದಾರೆ. ಕ್ರೀಡೆಯನ್ನು ಕ್ರೀಡೆಯಾಗಿ ನೋಡಿ, ರಾಜಕೀಯವನ್ನು ಬೆರೆಸಬೇಡಿ ಎಂದು ಹೇಳಿದ್ದಾರೆ.
ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಪಾಕಿಸ್ತಾನ ತಂಡ, 19.1 ಓವರ್‌ಗಳಿಗೆ 146 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಭಾರತ ತಂಡ, ಅಭಿಷೇಕ್ ಶರ್ಮಾ ಸ್ಪೋಟಕ ಅರ್ಧಶತಕದ ಬಲದಿಂದ 19.4 ಓವರ್‌ಗಳಿಗೆ 150 ರನ್ ಗಳಿಸಿ ಐದು ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಆ ಮೂಲಕ ಈ ಟೂರ್ನಿಯಲ್ಲಿ ಭಾರತ, ಪಾಕ್ ಎದುರು ಹ್ಯಾಟ್ರಿಕ್ ಗೆಲುವು ಸಾಧಿಸಿದರ ಜೊತೆಗೆ 9ನೇ ಬಾರಿ ಏಷ್ಯಾ ಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಅಂದ ಹಾಗೆ ಈ ಪಂದ್ಯದಲ್ಲಿಯೂ ಉಭಯ ತಂಡಗಳ ಆಟಗಾರರ ನಡುವೆ ಹ್ಯಾಂಡ್‌ಶೇಕ್ ಇರಲಿಲ್ಲ.
ಫೈನಲ್ ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿಗಳನ್ನು ತಿಲಕ್ ವರ್ಮಾ ಹಾಗೂ ಅಭಿಷೇಕ್ ಶರ್ಮಾ ಪಡೆದಿದ್ದರು. ಆದರೆ, ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ರನ್ನರ್ ಅಪ್‌ಗೆ ನೀಡುವ ಚೆಕ್ ಪಡೆದು ಮೈದಾನದಲ್ಲಿಯೇ ಬಿಸಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ನಂತರ ಭಾರತ ತಂಡ, ಏಷ್ಯಾ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥರಾದ ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾ ಕಪ್ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತ್ತು. ಈ ಬಗ್ಗೆ ಇದೀಗ ವಿವಾದ ಉಂಟಾಗಿದೆ.
ಕ್ರೀಡೆಗೆ ರಾಜಕೀಯವನ್ನು ತರಬೇಡಿ
ಈ ಹಿಂದೆ ಭಾರತ ತಂಡದ ವಿರುದ್ಧ ಸೂಪರ್-4ರ ಪಂದ್ಯದಲ್ಲಿ ಹ್ಯಾರಿಸ್ ರೌಫ್ ಅವರು ವಿಮಾನವನ್ನು ಹೊಡೆದುರುಳಿದ ರೀತಿ ಕೈ ಸನ್ನೆ ಮಾಡಿದ್ದರು ಹಾಗೂ ಸಾಹಿಬ್‌ಝಾದ ಫರ್ಹಾನ್ ಅವರು ಅರ್ಧಶತಕ ಸಿಡಿಸಿದ ಬಳಿಕ ಗನ್ ಶಾಟ್ ಸೆಲೆಬ್ರೇಷನ್ ಮಾಡಿದ್ದರು. ಇದೀಗ ಈ ವಿವಾದಗಳ ಬಗ್ಗೆ 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ನಾನು ಹೇಳುವುದೇನೆಂದರೆ- ನಿಮ್ಮ ಜವಾಬ್ದಾರಿ ಮತ್ತು ಇಡೀ ಮಾಧ್ಯಮದ ಜವಾಬ್ದಾರಿಯೂ ಸಹ ನಾವು ರಾಜಕೀಯದ ಕಡೆ ನೋಡುವ ಬದಲು ಕ್ರೀಡೆಯ ಕಡೆ ನೋಡಬೇಕು. ಹೌದು, ಮಾಧ್ಯಮವು ಎಲ್ಲವನ್ನೂ ಮೇಜಿನ ಮೇಲೆ ತರುವ ಜವಾಬ್ದಾರಿಯನ್ನು ಹೊಂದಿದೆ, ಆದರೆ ಒಬ್ಬ ಕ್ರೀಡಾಪಟುವಾಗಿ, ನಾವು ಕ್ರೀಡೆಗಳಿಗೆ ಅಂಟಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅದು ಹೆಚ್ಚು ಉತ್ತಮವಾಗಿರುತ್ತದೆ," ಎಂದು ಕಪಿಲ್ ದೇವ್ ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಈಗಿನ ಪಾಕಿಸ್ತಾನ ತಂಡ 80, 90ರ ದಶಕದ ರೀತಿ ಬಲಿಷ್ಠವಾಗಿಲ್ಲ: ಕಪಿಲ್ ದೇವ್
"ಹೌದು, 80, 90 ಅಥವಾ ಅದಕ್ಕಿಂತ ಮೊದಲು ಆಗಿನ ಆಟಗಾರರಿಗೆ ಇದ್ದ ಪ್ರತಿಭೆ ಈಗಿನ ಪಾಕಿಸ್ತಾನ ತಂಡದ ಆಟಗಾರರಿಗೆ ಇಲ್ಲ ಎಂದು ನಾನು ಭಾವಿಸುತ್ತೇನೆ. ಪಾಕಿಸ್ತಾನ ನಮಗೆ, ಜಗತ್ತಿಗೆ, ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರನ್ನು ನೀಡಿದೆ. ನೀವು ಇಮ್ರಾನ್ ಖಾನ್ ಬಗ್ಗೆ ಮಾತನಾಡಬಹುದು, ಜಾವೇದ್ ಮಿಯಾಂದಾದ್, ಜಹೀರ್ ಅಬ್ಬಾಸ್, ವಸೀಮ್ ಅಕ್ರಮ್, ವಖಾರ್ ಯೂನಿಸ್ ಬಗ್ಗೆ ಮಾತನಾಡಬಹುದು. ಅವರು ನಮಗೆ ಆ ಪ್ರತಿಭೆಯನ್ನು ನೀಡಿದ್ದಾರೆ. ಆದರೆ ದುರದೃಷ್ಟವಶಾತ್, ಇಂದು ನಾವು ಅಂತಹ ಪ್ರತಿಭೆಯನ್ನು ನೋಡಲು ಸಾಧ್ಯವಿಲ್ಲ-ಅವರು ಹೊಂದಿದ್ದ ಶೇಕಡಾ ಒಂದರಷ್ಟು ಪ್ರತಿಭೆ ಈಗಿನ ತಂಡಕ್ಕಿಲ್ಲ," ಎಂದು ಕಪಿಲ್ ದೇವ್ ಬೇಸರ ವ್ಯಕ್ತಪಡಿಸಿದ್ದಾರೆ.