ಜಾತಿ ಗಣತಿ; ಧರ್ಮದ ಕಾಲಂನಲ್ಲಿ 'ಲಿಂಗಾಯತ'ರೆಂದು ಬರೆಸುವಂತೆ ಲಿಂಗಾಯತ ಮಠಾಧೀಶರ ಒಕ್ಕೂಟ ಮನವಿ

ಜಾತಿ ಗಣತಿ; ಧರ್ಮದ ಕಾಲಂನಲ್ಲಿ 'ಲಿಂಗಾಯತ'ರೆಂದು ಬರೆಸುವಂತೆ ಲಿಂಗಾಯತ ಮಠಾಧೀಶರ ಒಕ್ಕೂಟ ಮನವಿ

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆ.22ರಿಂದ ಅ.7ರ ವರೆಗೆ ನಡೆಸಲಿದ್ದು, ಈ ವೇಳೆಯಲ್ಲಿ ಲಿಂಗಾಯತ ಸಮುದಾಯವರು ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದು ಉಪಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಉಪಜಾತಿಯನ್ನು ಬರೆಸಬೇಕು ಎಂದು ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು ಮನವಿ ಮಾಡಿದ್ದಾರೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತವು ಪ್ರತ್ಯೇಕ ಸ್ವತಂತ್ರ ಧರ್ಮವಾದರೂ, ಅದರೊಳಗೆ 97 ಬೇರೆ-ಬೇರೆ ಹೆಸರಿನ ಜಾತಿ (ಒಳಪಂಗಡ)ಗಳಿವೆ. ಈವರೆಗೆ ನಡೆದ ಜನಗಣತಿಗಳಲ್ಲಿ ಬಹುತೇಕ ಲಿಂಗಾಯತರು ತಮ್ಮ ಧರ್ಮವನ್ನು ‘ಹಿಂದೂ’ ಎಂದು ಬರೆಸಿದ್ದು ಕಂಡುಬರುತ್ತದೆ. ಅದು ತಮ್ಮ ಧರ್ಮದ ಬಗ್ಗೆ ಲಿಂಗಾಯತರಲ್ಲಿದ್ದ ಅರಿವಿನ ಕೊರತೆಯ ಸಂಕೇತವಾಗಿದೆ ಎಂದರು.

ಜನಗಣತಿಯಲ್ಲಿ ಕೆಲವು ಲಿಂಗಾಯತ ವಿರೋಧಿ ಸಂಸ್ಥೆಗಳು, ಎಲ್ಲ ಲಿಂಗಾಯತರು ಹಿಂದೂ ಎಂದು ಬರೆಸಬೇಕೆಂದು ಹೇಳುತ್ತಾ, ಲಿಂಗಾಯತರನ್ನು ದಾರಿ ತಪ್ಪಿಸುತ್ತಿವೆ. 2023ರ ಡಿಸೆಂಬರ್‌ನಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯು ಲಿಂಗಾಯತರು ಹಿಂದೂಗಳಲ್ಲವೆಂದು ಸ್ಪಷ್ಟವಾಗಿ ನಿರ್ಣಯ ಮಾಡಿದೆ. ಜಾತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ 2002ರಲ್ಲಿ ಹೊರಡಿಸಿದ ಆದೇಶದಲ್ಲಿ ಅನ್ಯಾಯವಾಗಿ ಸತ್ಯಕ್ಕೆ ವಿರುದ್ಧವಾಗಿ ಕೆಲವು ಗುಂಪುಗಳ ಒತ್ತಡಕ್ಕೆ ಮಣಿದು ಲಿಂಗಾಯತರನ್ನು ‘ವೀರಶೈವ ಲಿಂಗಾಯತ’ರೆಂದು ಅಧಿಸೂಚನೆ ಹೊರಡಿಸಿದ್ದು ತಪ್ಪಾಗಿದೆ ಎಂದು ಅವರು ತಿಳಿಸಿದರು.

ಲಿಂಗಾಯತದಲ್ಲಿರುವ 97 ಉಪಜಾತಿಗಳಲ್ಲಿ ವೀರಶೈವ ಒಂದು ಜಾತಿ ಮಾತ್ರ. ಲಿಂಗಾಯತದಲ್ಲಿ ವೀರಶೈವವಿದೆ, ಆದರೆ ವೀರಶೈವದಲ್ಲಿ ಲಿಂಗಾಯತವಿಲ್ಲ. ಆದುದರಿಂದ ‘ವೀರಶೈವ ಲಿಂಗಾಯತ’ ಎನ್ನುವುದು ಸಂಪೂರ್ಣವಾಗಿ ತಪ್ಪು. ಇದೇ ತಪ್ಪನ್ನು ಅಖಿಲ ಭಾರತ ವೀರಶೈವ ಮಹಾಸಭೆಯು ಮುಂದುವರಿಸುತ್ತಿದೆ. ಇದರಲ್ಲಿ ಆ ಸಂಘಟನೆಗಳ ಪದಾಧಿಕಾರಿಗಳ ರಾಜಕೀಯ ಹಿತಾಸಕ್ತಿ ಅಡಗಿದೆ. ಇಂತಹ ರಾಜಕಾರಣಿಗಳ ಮಾತನ್ನು ಲಿಂಗಾಯತರು ಕೇಳಬಾರದು ಎಂದು ಡಾ.ಬಸವಲಿಂಗ ಪಟ್ಟದೇವರು ಸೂಚನೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದ ತೋಂಟದ ಸಿದ್ದರಾಮ ಸ್ವಾಮಿ, ಮಹಾಂತ ದೇವರು, ಬೆಳ್ಳಿಮಠ ಶಿವರುದ್ರ ಸ್ವಾಮಿ ಬೇಲಿಮಠ, ಸಿದ್ದಲಿಂಗ ಮಹಾಸ್ವಾಮಿ, ಅಲ್ಲಮಪ್ರಭು ಮಹಾಸ್ವಾಮಿ, ಗಂಗಾಮಾತಾಜಿ, ಬಸವಲಿಂಗ ಸ್ವಾಮಿ, ಚನ್ನಬಸವ ಸ್ವಾಮಿ, ನಂಜುಂಡಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Ads on article

Advertise in articles 1

advertising articles 2

Advertise under the article