ಮರು ಎಣಿಕೆಯಲ್ಲಿ ನಾನು ಸೋತರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ: ಮಾಲೂರು ಶಾಸಕ ಕೆ.ವೈ.ನಂಜೇಗೌಡ ಸವಾಲು
ಕೋಲಾರ: ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆಯಲ್ಲಿ ನಾನು ಸೋತರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದ್ದಾರೆ.
ತಾಲೂಕಿನ ರಾಮಸಂದ್ರ ಗಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ಮಂಜುನಾಥಗೌಡ ಅವರನ್ನು ನಾನೇ ಹೊಸಕೋಟೆಯಿಂದ ಮಾಲೂರಿಗೆ ಕರೆತಂದು ನನ್ನ ಶ್ರಮದಲ್ಲಿ ಗೆಲ್ಲಿಸಿದೆ. ಆತ ಈಗ ನನ್ನ ವಿರುದ್ಧ ಪಟಾಕಿ ಸಿಡಿಸಿ ಸಂಭ್ರಮಿಸಿ, ಹುಚ್ಚನಂತಾಡುತ್ತಿದ್ದಾನೆ ಎಂದು ಕಿಡಿಕಾರಿದರು.
2023ರ ವಿಧಾನಸಭಾ ಚುನಾವಣೆ ನಡೆಯುವಾಗ ರಾಜ್ಯದಲ್ಲಿ ಇದ್ದುದ್ದು ಬಿಜೆಪಿ ಸರಕಾರ, ಅವರದ್ದೇ ಅಧಿಕಾರಿಗಳು ಮತ್ತು ಪೊಲೀಸರು ಇದ್ದರು. ಮತ ಎಣಿಕೆ ದಿನ ನಾನು ಮನೆಯಲ್ಲಿ ಇದ್ದೆ. ಎಣಿಕೆ ಕಾರ್ಯ ಮುಕ್ತಾಯಗೊಂಡ ನಂತರ ಮಂಜುನಾಥಗೌಡ ಮನವಿ ಮೇರೆಗೆ ಚುನಾವಣಾಧಿಕಾರಿಗಳು ವಿ.ವಿ.ಪ್ಯಾಟ್ ತಾಳೆ ಮಾಡಲು ಲಾಟರಿ ಎತ್ತಿ ನಂತರ ಫಲಿತಾಂಶ ಘೋಷಿಸಿದರು. ಈಗ ಆತ ಬೇರೇನೋ ಮಾತನಾಡುತ್ತಿದ್ದಾರೆ. ಮೂರು ಎಣಿಕೆ ನಡೆಯಲಿ ಅಥವಾ ಹೊಸದಾಗಿ ಚುನಾವಣೆ ನಡೆಯಲಿ. ಅವರಿಗೆೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಅವರು ಹೇಳಿದರು.