ಕರೂರ್ ಕಾಲ್ತುಳಿತ ಪ್ರಕರಣ: ಮೃತರ ಕುಟುಂಬಗಳಿಗೆ ತಲಾ ₹20 ಲಕ್ಷ ಪರಿಹಾರ ಘೋಷಿಸಿದ ನಟ ವಿಜಯ್
ನವದೆಹಲಿ: ತಮಿಳುನಾಡಿನ ಕರೂರಿನಲ್ಲಿ ನಿನ್ನೆ ಸಂಜೆ ನಡೆದ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಬಲಿಯಾದ 39 ಜನರ ಕುಟುಂಬಗಳಿಗೆ ನಟ-ರಾಜಕಾರಣಿ ವಿಜಯ್ ತಲಾ 20 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೆ, ದುರಂತದಲ್ಲಿ ಗಾಯಗೊಂಡ ಸುಮಾರು 100 ಜನರಿಗೆ ತಮ್ಮ ಪಕ್ಷವು ತಲಾ 2 ಲಕ್ಷ ರೂ.ಗಳನ್ನು ನೀಡಲಿದೆ ಎಂದು ಟಿವಿಕೆ ಮುಖ್ಯಸ್ಥರು ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿನ ಪೋಸ್ಟ್‌ನಲ್ಲಿ, 'ತಾನು ದುಃಖದಿಂದ ಮುಳುಗಿದ್ದೇನೆ. ನನ್ನ ಹೃದಯ ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ಪದಗಳೇ ಸಾಲುತ್ತಿಲ್ಲ. ನನ್ನ ಕಣ್ಣುಗಳು ಮತ್ತು ಮನಸ್ಸು ದುಃಖದಿಂದ ಆವೃತವಾಗಿವೆ. ನಾನು ಭೇಟಿಯಾದ ನಿಮ್ಮೆಲ್ಲರ ಮುಖಗಳು ನನ್ನ ಮನಸ್ಸಿನಲ್ಲಿ ಮಿನುಗುತ್ತಲೇ ಇರುತ್ತವೆ. ಪ್ರೀತಿ ಮತ್ತು ಕಾಳಜಿಯನ್ನು ತೋರಿಸುವ ನನ್ನ ಪ್ರೀತಿಪಾತ್ರರ ಬಗ್ಗೆ ಹೆಚ್ಚು ಯೋಚಿಸುತ್ತಿದ್ದಂತೆ, ನನ್ನ ಹೃದಯ ಭಾರವಾಗುತ್ತದೆ' ಎಂದು ಅವರು ಹೇಳಿದರು.
ಆಕಸ್ಮಿಕವಲ್ಲ, ಅದೊಂದು ಪಿತೂರಿ, ಸ್ವತಂತ್ರ ತನಿಖೆಗೆ ಟಿವಿಕೆ ಒತ್ತಾಯ
ಕರೂರ್ ರ್ಯಾಲಿಯಲ್ಲಿ 10 ಮಕ್ಕಳು ಸೇರಿದಂತೆ 40 ಜನರು ಸಾವನ್ನಪ್ಪಿದ ಕಾಲ್ತುಳಿತದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಭಾನುವಾರ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಮುಂದೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದೆ. ಈ ದುರಂತ ಆಕಸ್ಮಿಕವಲ್ಲ, ಬದಲಾಗಿ "ಪಿತೂರಿ"ಯ ಪರಿಣಾಮ ಎಂದು ಪಕ್ಷ ಆರೋಪಿಸಿದೆ. ಜನಸಮೂಹದ ಮೇಲೆ ಕಲ್ಲು ತೂರಾಟ ಮತ್ತು ಸ್ಥಳದಲ್ಲಿ ಪೊಲೀಸ್ ಲಾಠಿ ಚಾರ್ಜ್ ಅನ್ನು ಘಟನೆಗೆ ಕಾರಣ ಎಂದು ತೋರಿಸಿದೆ.
ಕರೂರ್ ಕಾಲ್ತುಳಿತದ ತನಿಖೆ ಪೂರ್ಣಗೊಳ್ಳುವವರೆಗೆ ನಟ ವಿಜಯ್ ಅವರ ಟಿವಿಕೆ ಯಾವುದೇ ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ತುರ್ತು ಅರ್ಜಿಯನ್ನು ನ್ಯಾಯಮೂರ್ತಿ ಎನ್ ಸೆಂಥಿಲ್‌ಕುಮಾರ್ ಇಂದು ಸಂಜೆ 4:30 ಕ್ಕೆ ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.