
CM ಆಗಲು ಎಲ್ಲರಿಗೂ ಆಸೆಯಿದೆ, ಅವಕಾಶ ಸಿಕ್ಕಿದರೆ ನಾನೂ ಸಿಎಂ ಆಗುತ್ತೇನೆ; ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ, ಐದು ವರ್ಷ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ: ಸಚಿವ ಝಮೀರ್ ಅಹ್ಮದ್
ಹುಬ್ಬಳ್ಳಿ: ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ನವೆಂಬರ್‌ನಲ್ಲಿ ಯಾವುದೇ ಕ್ರಾಂತಿ ನಡೆಯಲ್ಲ ಎಂದು ವಸತಿ ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾಗುತ್ತದೆ ಎನ್ನುವುದು ಮಾಧ್ಯಮಗಳ ಸೃಷ್ಟಿಯಾಗಿದೆ ಎಂದು ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಆಗಲು ಎಲ್ಲರಿಗೂ ಆಸೆಯಿದೆ. ಅವಕಾಶ ಸಿಕ್ಕಿದರೆ ನಾನೂ ಸಿಎಂ ಆಗುತ್ತೇನೆ. ಆದರೆ, ಇದೆಲ್ಲವೂ ಹೈಕಮಾಂಡ್ ನಿರ್ಧಾರದ ಮೇಲೆ ಅವಲಂಬಿತವಾಗಿದ್ದು, ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ನವೆಂಬರ್‌ನಲ್ಲಿ ಸಂಪುಟ ಪುನರ್‌ರಚನೆಯಾಗುತ್ತದೆ ಎನ್ನುವ ಮಾಹಿತಿ ಇದೆ. ಕೆಲ ಸಚಿವರನ್ನು ತೆಗೆದು ಹೊಸಬರಿಗೆ ಅವಕಾಶ ನೀಡುವ ಮಾಹಿತಿ ಇದೆ. ಇದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.
ಕಾಂಗ್ರೆಸ್ ಸರಕಾರದಲ್ಲಿ ಯಾವುದೇ ಆಂತರಿಕ ಕಲಹವಿಲ್ಲ. ಬದಲಿಗೆ ಬಿಜೆಪಿಯಲ್ಲಿ ಹಲವಾರು ಬಣಗಳಾಗಿವೆ. ಬಿಜೆಪಿಯಲ್ಲಿ ಐದು ಗುಂಪುಗಳಿದ್ದು, ಮೊದಲು ತಮ್ಮ ಮನೆ ಸರಿ ಮಾಡಿಕೊಳ್ಳಲಿ ಎಂದು ಝಮೀರ್ ಅಹ್ಮದ್ ತಿರುಗೇಟು ನೀಡಿದರು.