ಕರ್ನೂಲ್‌ ಬಸ್‌ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನ

ಕರ್ನೂಲ್‌ ಬಸ್‌ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನ

ಹೈದರಾಬಾದ್‌: ಕರ್ನೂಲ್‌ನಲ್ಲಿ ನಡೆದ ಭೀಕರ ಬಸ್‌ ದುರಂತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ನೆಲ್ಲೂರು ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಸಜೀವದಹನವಾಗಿದ್ದಾರೆ. ನಿದ್ರೆ ಮಂಪರಿನಲ್ಲಿದ್ದ ಸುಂದರ ಕುಟುಂಬ ಬೆಳಗಿನ ಸೂರ್ಯೋದಯ ನೋಡುವುದಕ್ಕೆ ಮುನ್ನವೇ ಸಾವಿನ ಮನೆಗೆ ಪ್ರಯಾಣಿಸಿದೆ.

ಗೊಲ್ಲ ರಮೇಶ್ (35), ಅನುಷಾ (30), ಮಾನ್ವಿತಾ (10) ಹಾಗೂ ಮನೀಶ್ (12) ಮೃತ ದುರ್ದೈವಿಗಳು. ಇವರು ಮೂಲತಃ ನೆಲ್ಲೂರು ಜಿಲ್ಲೆಯ ವಿಂಜಾಮುರು ಮಂಡಲದ ಗೊಲ್ಲವರಿಪಳ್ಳಿಯವರು.

ಗೊಲ್ಲ ರಮೇಶ್‌ ಕುಟುಂಬವು ಬೆಂಗಳೂರಿನಲ್ಲಿ ನೆಲೆಸಿತ್ತು. ಹೈದರಾಬಾದ್‌ನಿಂದ ಬೆಂಗಳೂರಿಗೆ ಬಸ್‌ನಲ್ಲಿ ಬರುವಾಗ ಶುಕ್ರವಾರ ಮುಂಜಾನೆ ಕರ್ನೂಲ್ ಜಿಲ್ಲೆಯ NH-44 ರಲ್ಲಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ನಂತರ ದುರಂತ ಸಂಭವಿಸಿದೆ. ಘಟನೆಯಲ್ಲಿ ಇಡೀ ಕುಟುಂಬ ಸಜೀವದಹನವಾಗಿದೆ. ವಿಷಯ ತಿಳಿದು ಗೊಲ್ಲವರಿಪಳ್ಳಿಯ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಗೊಲ್ಲ ರಮೇಶ್‌ ಕುಟುಂಬ ದೀಪಾವಳಿ ಹಬ್ಬ ಆಚರಣೆಗೆ ನೆಲ್ಲೂರಿಗೆ ತೆರಳಿತ್ತು ಎನ್ನಲಾಗಿದೆ.

ಕರ್ನೂಲ್‌ ಡಿಸಿ ಹೇಳಿದ್ದೇನು?

ಕರ್ನೂಲ್ ಬಸ್ ದುರಂತದ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ಡಾ.ಎ ಸಿರಿ, ಖಾಸಗಿ ಬಸ್ ದುರಂತ ಬೆಳಗ್ಗಿನ ಜಾವ 3 ರಿಂದ 3:10ರ ಸುಮಾರಿಗೆ ಆಗಿದೆ. ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಂಧನ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ. ಬಸ್‌ನಲ್ಲಿದ್ದ 41 ಪ್ರಯಾಣಿಕರಲ್ಲಿ 23 ಜನರನ್ನ ರಕ್ಷಿಸಲಾಗಿದೆ. ಇಲ್ಲಿಯವರೆಗೆ ಮೃತರಲ್ಲಿ 11 ಜನರನ್ನು ಗುರುತಿಸಲಾಗಿದೆ, ಉಳಿದವರ ಗುರುತು ಪತ್ತೆ ಮಾಡುವ ಕಾರ್ಯ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ. 

ಬೈಕ್‌ನಲ್ಲಿದ್ದ ವ್ಯಕ್ತಿಯನ್ನು ಶಿವಶಂಕರ್ ಎಂದು ಗುರುತಿಸಲಾಗಿದೆ. ಬಸ್ಸು ಮತ್ತು ಬೈಕ್‌ ಒಂದೇ ದಿಕ್ಕಿನಲ್ಲಿ ಪ್ರಯಾಣಿಸುತ್ತಿತ್ತು. ವೇಗವಾಗಿ ಬರುತ್ತಿದ್ದ ಬಸ್ಸು ಮೊದಲು ಹಿಂಬದಿಯಿಂದ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಕೆಳಗಡೆ ಬಿದ್ದಿದೆ. ಬೈಕ್‌ ಕೆಳಗಡೆ ಬಿದ್ದರೂ ಚಾಲಕ ಬಸ್ಸನ್ನು ವೇಗವಾಗಿ ಚಲಾಯಿಸಿದ್ದಾನೆ.

ಕೆಳಭಾಗದಲ್ಲಿ ಸಿಲುಕಿಕೊಂಡಿದ್ದ ಬೈಕನ್ನು ಬಸ್ಸು 300 ಮೀ. ದೂರದವರೆಗೆ ಎಳೆದುಕೊಂಡು ಹೋಗಿದೆ. ಈ ವೇಳೆ ಬೈಕಿನಲ್ಲಿದ್ದ ಪೆಟ್ರೋಲ್‌ ಕೆಳಕ್ಕೆ ಚೆಲ್ಲಿದೆ. ರಸ್ತೆಯಲ್ಲಿ ಬೈಕನ್ನು ಎಳೆದುಕೊಂಡು ಹೋಗಿದ್ದರಿಂದ ಘರ್ಷಣೆಯಿಂದಾಗಿ ಕಿಡಿ ಹೊತ್ತಿದೆ. ಬೆಂಕಿಯ ಕಿಡಿ ಡೀಸೆಲ್‌ ಟ್ಯಾಂಕ್‌ ಮೇಲೆ ಚಿಮ್ಮಿದೆ. ಟ್ಯಾಂಕ್‌ಗೆ ಕಿಡಿ ಚಿಮ್ಮಿದ ಕೂಡಲೇ ಬೆಂಕಿ ಹೊತ್ತಿಕೊಂಡು ಟ್ಯಾಂಕ್‌ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಡೀಸೆಲ್‌ ಮೇಲುಗಡೆ ಹಾರಿದ್ದರಿಂದ ಸುಲಭವಾಗಿ ಬೆಂಕಿ ಹರಡಿ ಕ್ಷಣಮಾತ್ರದಲ್ಲಿ ಬಸ್ಸು ಧಗಧಗಿಸಿದೆ.

Ads on article

Advertise in articles 1

advertising articles 2

Advertise under the article