ಕರ್ನೂಲ್‌ ಭೀಕರ ಬಸ್ ದುರಂತಕ್ಕೆ 20 ಬಲಿ; ಈ ಘಟನೆ ನಡೆದ್ದು ಹೇಗೆ...? ಈ ದುರ್ಘಟನೆಗೆ ಬೈಕ್‌ ಹೇಗೆ ಕಾರಣವಾಯಿತು ..?

ಕರ್ನೂಲ್‌ ಭೀಕರ ಬಸ್ ದುರಂತಕ್ಕೆ 20 ಬಲಿ; ಈ ಘಟನೆ ನಡೆದ್ದು ಹೇಗೆ...? ಈ ದುರ್ಘಟನೆಗೆ ಬೈಕ್‌ ಹೇಗೆ ಕಾರಣವಾಯಿತು ..?

ಹೈದರಾಬಾದ್‌: ಕರ್ನೂಲ್‌ನಲ್ಲಿ ನಡೆದ ಭೀಕರ ಬಸ್ಸು ದುರಂತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದಾರೆ. ಆದರೆ ಈ ದುರಂತಕ್ಕೆ ಕಾರಣವಾದ ಬೈಕ್‌  ಮತ್ತು ಬಸ್ಸಿನ ನಡುವೆ ಅಪಘಾತ ಹೇಗೆ ಸಂಭವಿಸಿದೆ ಎನ್ನುವುದರ ಬಗ್ಗೆ ಈಗ ತನಿಖೆ ನಡೆಯುತ್ತಿದೆ.

ದುರಂತ ಹೇಗಾಯ್ತು?

ಬೈಕ್‌ನಲ್ಲಿದ್ದ ವ್ಯಕ್ತಿಯನ್ನು ಶಿವಶಂಕರ್ ಎಂದು ಗುರುತಿಸಲಾಗಿದೆ. ಬಸ್ಸು ಮತ್ತು ಬೈಕ್‌ ಒಂದೇ ದಿಕ್ಕಿನಲ್ಲಿ ಪ್ರಯಾಣಿಸುತ್ತಿತ್ತು. ವೇಗವಾಗಿ ಬರುತ್ತಿದ್ದ ಬಸ್ಸು ಮೊದಲು ಹಿಂಬದಿಯಿಂದ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಕೆಳಗಡೆ ಬಿದ್ದಿದೆ. ಬೈಕ್‌ ಕೆಳಗಡೆ ಬಿದ್ದರೂ ಚಾಲಕ ಬಸ್ಸನ್ನು ವೇಗವಾಗಿ ಚಲಾಯಿಸಿದ್ದಾನೆ.

ಕೆಳಭಾಗದಲ್ಲಿ ಸಿಲುಕಿಕೊಂಡಿದ್ದ ಬೈಕನ್ನು ಬಸ್ಸು 300 ಮೀ. ದೂರದವರೆಗೆ ಎಳೆದುಕೊಂಡು ಹೋಗಿದೆ. ಈ ವೇಳೆ ಬೈಕಿನಲ್ಲಿದ್ದ ಪೆಟ್ರೋಲ್‌  ಕೆಳಕ್ಕೆ ಚೆಲ್ಲಿದೆ.  ರಸ್ತೆಯಲ್ಲಿ ಬೈಕನ್ನು ಎಳೆದುಕೊಂಡು ಹೋಗಿದ್ದರಿಂದ ಘರ್ಷಣೆಯಿಂದಾಗಿ ಕಿಡಿ ಹೊತ್ತಿದೆ. ಬೆಂಕಿಯ ಕಿಡಿ ಡೀಸೆಲ್‌ ಟ್ಯಾಂಕ್‌ ಮೇಲೆ ಚಿಮ್ಮಿದೆ. ಟ್ಯಾಂಕ್‌ಗೆ ಕಿಡಿ ಚಿಮ್ಮಿದ ಕೂಡಲೇ  ಹೊತ್ತಿಕೊಂಡು ಟ್ಯಾಂಕ್‌ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಡೀಸೆಲ್‌ ಮೇಲುಗಡೆ ಹಾರಿದ್ದರಿಂದ ಸುಲಭವಾಗಿ ಬೆಂಕಿ ಹರಡಿ ಕ್ಷಣಮಾತ್ರದಲ್ಲಿ ಬಸ್ಸು  ಧಗಧಗಿಸಿದೆ.

ಬೆಂಗಳೂರು ಮತ್ತು ಹೈದರಾಬಾದ್‌ ಮಧ್ಯೆ 575 ಕಿ.ಮೀ ಅಂತರವಿರುವುದರಿಂದ ಇಬ್ಬರು ಚಾಲಕರು ಬಸ್ಸಿನಲ್ಲಿದ್ದರು. ಸಾಧಾರಣವಾಗಿ ದೀರ್ಘ ಪ್ರಯಾಣಕ್ಕೆ ಇಬ್ಬರು ಚಾಲಕರನ್ನು ನಿಯೋಜಿಸಲಾಗುತ್ತದೆ. ದುರಂತ ನಡೆದ ಬಳಿಕ ಬಸ್ಸು ಚಾಲನೆ ಮಾಡುತ್ತಿದ್ದ ಚಾಲಕ ಪರಾರಿಯಾಗಿದ್ದರೆ ಮತ್ತೊಬ್ಬ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸ್ಲೀಪರ್‌ ಕೋಚ್‌ ಬಸ್ಸುಗಳ ಮಲಗುವ ಜಾಗಗಳನ್ನು ಮರದ ಪ್ಲೈವುಡ್‌ ಬಳಸಿ ಸಿದ್ಧಪಡಿಸುತ್ತಾರೆ. ಇದರ ಮೇಲೆ ಕಿರು ಹಾಸಿಗೆ ಇರುತ್ತದೆ.  ಮರ, ಹಾಸಿಗೆ ಎರಡೂ ಬೆಂಕಿ ತಗುಲಿದ ಕೂಡಲೇ ಜ್ವಾಲೆ ಮತ್ತಷ್ಟು ಹೆಚ್ಚಾಗಿದೆ.

ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವು ಆಗಮಿಸಿ ತನಿಖೆ ನಡೆಸುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ತಿಳಿಸಿದ್ದಾರೆ. ಒಂದು ವೇಳೆ ಬೈಕ್‌ಗೆ ಗುದ್ದಿದ ಕೂಡಲೇ ಬಸ್ಸನ್ನು ನಿಲ್ಲಿಸಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ. ಚಾಲಕ ನಿಲ್ಲಸದೇ ಬೇಜವಾಬ್ದಾರಿ ವರ್ತನೆ ತೋರಿದ್ದರಿಂದ ಅಮಾಯಕರ ಜೀವಗಳು ಬಲಿಯಾಗಿದೆ.

ಆಂಧ್ರದ ಕರ್ನೂಲ್‌ ಬಳಿಯ ಚಿನ್ನಟೇಕೂರು ಈ ದುರಂತ ಸಂಭವಿಸಿ 20 ಮಂದಿ ಮೃತಪಟ್ಟಿದ್ದಾರೆ. ಸ್ಲೀಪರ್‌ ಕೋಚ್‌ ಬಸ್ಸು ಆಗಿದ್ದ ಕಾರಣ ಪ್ರಯಾಣಿಕರು ನಿದ್ದೆ ಮಾಡುತ್ತಿದ್ದರು. ಸಾಧಾರಣವಾಗಿ ವೋಲ್ವೋ ಬಸ್ಸಿನಲ್ಲಿ ಕಿಟಕಿಯ ಗಾಜುಗಳು ಸಂಪೂರ್ಣವಾಗಿ ಲಾಕ್‌ ಆಗಿರುತ್ತದೆ. ಹೀಗಿದ್ದರೂ ಬೆಂಕಿ ಕಾಣಿಸಿದ ಕೂಡಲೇ ಕೆಲ ಪ್ರಯಾಣಿಕರು ಗಾಜನ್ನು ಒಡೆದು ಕೆಳಗೆ ಹಾರಿ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article