ಯಾವುದೆ ಜಾತಿ, ಮತ, ಧರ್ಮದ ಆಧಾರದ ಮೇಲೆ ನಾಯಕತ್ವ ನಿರ್ಧಾರ ಆಗುವುದಿಲ್ಲ: ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಹುದ್ದೆ ಬಗ್ಗೆ ಈಶ್ವರ್ ಖಂಡ್ರೆ ಹೇಳಿಕೆ
ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಹುದ್ದೆಗಳು ಖಾಲಿ ಇಲ್ಲ. ಈ ಬಗ್ಗೆ ಚರ್ಚೆ ನಡೆಸುವುದು ಅಪ್ರಸ್ತುತ. ಯಾವುದೆ ಜಾತಿ, ಮತ, ಧರ್ಮದ ಆಧಾರದ ಮೇಲೆ ನಾಯಕತ್ವ ನಿರ್ಧಾರ ಆಗುವುದಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
‘ಸಿದ್ದರಾಮಯ್ಯ ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಅವರ ಸ್ಥಾನ ತುಂಬುವ ಶಕ್ತಿ ಸತೀಶ್ ಜಾರಕಿಹೊಳಿಗೆ ಖಂಡಿತವಾಗಿಯೂ ಇದೆ’ ಎಂದು ಯತೀಂದ್ರ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಕುರಿತು ಗುರುವಾರ ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ವಿಧಾನಪರಿಷತ್ ಸದಸ್ಯ ಯತೀಂದ್ರ ಅವರ ಮಾತುಗಳನ್ನು ಮುಖ್ಯಮಂತ್ರಿಯ ಧ್ವನಿ ಎಂಬಂತೆ ಬಿಂಬಿಸುವುದು ಸರಿಯಲ್ಲ. ಈಗಾಗಲೆ ಯತೀಂದ್ರ ಅವರೆ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದು, ತಾವು ಏನೂ ಹೇಳುವ ಅಗತ್ಯವಿಲ್ಲ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಪಕ್ಷ 2028ರಲ್ಲೂ ಮರಳಿ ಅಧಿಕಾರಕ್ಕೆ ಬರಲಿದ್ದು, ಆಗ ಪಕ್ಷದ ವರಿಷ್ಠರು, ಸೂಕ್ತ ಸಂದರ್ಭದಲ್ಲಿ, ಎಲ್ಲ ಜಾತಿ, ಸಮುದಾಯದವರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳುತ್ತಾರೆ. ನವೆಂಬರ್ ಕ್ರಾಂತಿ ಎಂಬುದು ಸಂಪೂರ್ಣ ಭ್ರಾಂತಿ, ರಾಜ್ಯ ಸರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದು, ಜನಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ವಿಪಕ್ಷಗಳು ಭಯಭೀತರಾಗಿವೆ ಎಂದು ಅವರು ಹೇಳಿದರು.
ದಿಲ್ಲಿಗೆ ಭೇಟಿ: ಇಂದು(ಗುರುವಾರ) ಸಂಜೆ ತಾವು ದಿಲ್ಲಿಗೆ ಹೋಗುತ್ತಿದ್ದು, ನಾಳೆ ಪಕ್ಷದ ಕೆಲವು ವರಿಷ್ಠರೊಂದಿಗೆ ಸೌಹಾರ್ದ ಭೇಟಿ ನಡೆಯಲಿದೆ. ಜೊತೆಗೆ ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿ, ಅರಣ್ಯ ಅಭಿವೃದ್ಧಿ ಶುಲ್ಕಕ್ಕೆ ಸಂಬಂಧಿಸಿದಂತೆ ಕೆಲವು ಪ್ರಕರಣಗಳು ಸುಪ್ರೀಂಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿದ್ದು, ಈ ಕುರಿತಂತೆ ಹಿರಿಯ ವಕೀಲರೊಂದಿಗೆ ಸಮಾಲೋಚನೆ ನಡೆಸುವುದಾಗಿ ಈಶ್ವರ್ ಖಂಡ್ರೆ ತಿಳಿಸಿದರು.
ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರು ಪ್ರವಾಸದಲ್ಲಿರುವ ಕಾರಣ ಸರಕಾರದ ಕಾರ್ಯದರ್ಶಿಯನ್ನು ಭೇಟಿ ಮಾಡಿ, ಕಾಂಪಾ ನಿಧಿ, ಎತ್ತಿನಹೊಳೆ ಯೋಜನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.
ಸಕ್ಕರೆ ಬೈಲು ಆನೆ ಶಿಬಿರದ ಆನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ನಾಲ್ಕು ಆನೆಗಳು ಗಾಯದಿಂದ ಬಳಲುತ್ತಿರುವ ವಿಷಯ ತಮಗೆ ತಿಳಿದ ಕೂಡಲೆ ತನಿಖೆಗೆ ಆದೇಶ ನೀಡಿದ್ದು, ತಜ್ಞ ವೈದ್ಯರಿಂದ ಆನೆಗಳ ಚಿಕಿತ್ಸೆಗೂ ಕ್ರಮ ವಹಿಸಲಾಗಿದೆ. ರಾಜ್ಯದಲ್ಲಿ ವನ್ಯಜೀವಿ ಪಶುವೈದ್ಯರ ಕೊರತೆ ಇದ್ದು, ನೇಮಕಾತಿಯವರೆಗೆ ಪಶುವೈದ್ಯಕೀಯ ಇಲಾಖೆಯಿಂದ ಎರವಲು ಸೇವೆ ಪಡೆಯುವಂತೆ ಸೂಚಿಸಲಾಗಿದೆ ಎಂದರು.
ಅರಣ್ಯ, ಪರಿಸರ ಸಚಿವನಾಗಿ ತೃಪ್ತಿ ಇದೆ: ತಮಗೆ ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಜವಾಬ್ದಾರಿ ನೀಡಿದ್ದು, ಮುಂದಿನ ಪೀಳಿಗೆಯ ಹಿತ ಕಾಯುವ ಕೆಲಸ ಮಾಡುತ್ತಿದ್ದೇನೆ ಎಂಬ ತೃಪ್ತಿ ತಮಗಿದೆ ಎಂದು ಪ್ರಶ್ನೆಯೊಂದಕ್ಕೆ ಈಶ್ವರ್ ಖಂಡ್ರೆ ಉತ್ತರಿಸಿದರು.
ಮಹಾಪುರುಷರು ಯಾವುದೆ ಜಾತಿಯ ಸ್ವತ್ತಲ್ಲ: ಮಹಾಪುರುಷರು ವಿಶ್ವದ ಬೆಳಕಾಗಿದ್ದು, ಯಾವುದೆ ಒಂದು ಜಾತಿಯ ಸ್ವತ್ತಲ್ಲ. ಆದರೆ, ಕೆಲವರು ಮಹಾಪುರುಷರನ್ನು ತಮ್ಮ ಜಾತಿ, ಜನಾಂಗ ಅಥವಾ ಸಂಸ್ಥೆಯ ಸ್ವತ್ತು ಎಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ ಎಂದ ಅವರು, ಒಗ್ಗಟ್ಟಿನಲ್ಲಿ ಶಕ್ತಿ ಇದೆ. ರಾಜ್ಯಕ್ಕೆ ರಾಷ್ಟ್ರಕ್ಕೆ ಒಳಿತಾಗುವಂತೆ ಎಲ್ಲ ಜಾತಿ, ಜನಾಂಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಆಗಬೇಕು. ವೀರಶೈವ-ಲಿಂಗಾಯತ ಸಮುದಾಯವನ್ನು ಒಗ್ಗೂಡಿಸಲು ಯಾರೆ ಪ್ರಯತ್ನ ಮಾಡಿದರೂ ಅದನ್ನು ಸ್ವಾಗತಿಸುವುದಾಗಿ ತಿಳಿಸಿದರು.