
ಡಿ.7ರಂದು ಲಂಬಾರ್ಡ್ ಮಿಷನ್ ಆಸ್ಪತ್ರೆ ಆಶ್ರಯದಲ್ಲಿ 2ನೇ ಆವೃತ್ತಿಯ 'ಉಡುಪಿ ಮ್ಯಾರಥಾನ್-2025': ಡಾ.ಸುಶೀಲ್ ಜತ್ತನ್ನ
ಉಡುಪಿ: ಉಡುಪಿಯ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆಯು, ಉಡುಪಿ ರನ್ನರ್ಸ್ ಕ್ಲಬ್‌ನ ಸಹಯೋಗದೊಂದಿಗೆ ಉಡುಪಿ ಮ್ಯಾರಥಾನ್‌ನ ಎರಡನೇ ಆವೃತ್ತಿಯನ್ನು ಇದೇ ಡಿ.7ರ ರವಿವಾರ ದಂದು ಅಜ್ಜರ ಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಿದೆ ಎಂದು ಮಿಷನ್ ಆಸ್ಪತ್ರೆಯ ನಿರ್ದಶಕ ಡಾ.ಸುಶೀಲ್ ಜತ್ತನ್ನ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿಯ ಮ್ಯಾರಥಾನ್, ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭ ಗೊಂಡು, ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಅಂತಿಮವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಈ ಮ್ಯಾರಥಾನ್ ಒಟ್ಟು ಐದು ವಿಭಾಗಗಳಲ್ಲಿ ನಡೆಯಲಿದೆ.ವಿವಿಧ ವಯೋಮಾನದ ಪುರುಷರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ 21ಕಿ.ಮೀ, 10ಕಿ.ಮೀ., 5ಕಿ.ಮೀ, 3ಕಿ.ಮೀ. ದೂರಕ್ಕೆ ನಡೆಯಲಿದೆ. ಅಲ್ಲದೇ ಈ ಬಾರಿ ಸಾರಿ ರನ್ ಹಾಗೂ ಫನ್ ರನ್‌ನ್ನು ಹೆಚ್ಚುವರಿಯಾಗಿ ಆಯೋಜಿಸಲಾಗುತ್ತದೆ. ಎಲ್ಲಾ ವಿಭಾಗಗಳಲ್ಲಿ ಮೊದಲ ಐದು ಸ್ಥಾನ ಗಳಿಸಿದವರಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಡಾ.ಜತ್ತನ್ನ ತಿಳಿಸಿದರು.
ಜನರ ದೈಹಿಕ ದೃಢತೆಯನ್ನು ಹೆಚ್ಚಿಸಲು, ಈಗ ಯುವವರ್ಗವನ್ನೂ ಕಾಡುತ್ತಿರುವ ಹೃದಯಾಘಾತದ ಕುರಿತಂತೆ ಜಾಗೃತಿ ಮೂಡಿಸುವುದು ಈ ಬಾರಿಯ ಉಡುಪಿ ಮ್ಯಾರಥಾನ್‌ನ ಪ್ರಮುಖ ಉದ್ದೇಶವಾಗಿದೆ ಎಂದರು.
ಈ ಬಾರಿಯ ಮ್ಯಾರಥಾನ್‌ನಲ್ಲಿ ದೇಶ-ವಿದೇಶಗಳಿಂದ 3000ಕ್ಕೂ ಅಧಿಕ ಮಂದಿ ಕ್ರೀಡಾಪಟುಗಳು ಸ್ಪರ್ಧಿಸುವ ನಿರೀಕ್ಷೆ ಇದೆ. ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ದೂರವಾಣಿ ಸಂಖ್ಯೆ: 94816 77856ನ್ನು ಅಥವಾ ಉಡುಪಿ ರನ್ನರ್ಸ್ ಕ್ಲಬ್‌ನ ವೆಬ್‌ಸೈಟ್‌ನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ರನ್ನರ್ಸ್ ಕ್ಲಬ್‌ನ ಅಧ್ಯಕ್ಷ ಡಾ.ತಿಲಕ್ ಚಂದ್ರ ಪಾಲ್, ಕಾರ್ಯದರ್ಶಿ ದಿವಾಕರ ಗಣಪತಿ ನಾಯಕ್, ಐಎಂಎ ಉಡುಪಿ- ಕರಾವಳಿ ಅಧ್ಯಕ್ಷ ಡಾ.ಅಶೋಕ್, ದಿವ್ಯೇಶ್ ಶೆಟ್ಟಿ ಉಪಸ್ಥಿತರಿದ್ದರು.