CJI ಗವಾಯಿ ಮೇಲೆ 'ಶೂ' ಎಸೆತ: ನನಗೆ ಯಾವುದೇ ಪಶ್ಚಾತ್ತಾಪವಿಲ್ಲ, ನಾನು ಮಾಡಿದ್ದು ಸರಿಯಿದೆ, ದೇವರೇ ನನ್ನನ್ನು ಪ್ರಚೋದಿಸಿದ್ದಾನೆ: ವಕೀಲ ರಾಕೇಶ್ ಕಿಶೋರ್

CJI ಗವಾಯಿ ಮೇಲೆ 'ಶೂ' ಎಸೆತ: ನನಗೆ ಯಾವುದೇ ಪಶ್ಚಾತ್ತಾಪವಿಲ್ಲ, ನಾನು ಮಾಡಿದ್ದು ಸರಿಯಿದೆ, ದೇವರೇ ನನ್ನನ್ನು ಪ್ರಚೋದಿಸಿದ್ದಾನೆ: ವಕೀಲ ರಾಕೇಶ್ ಕಿಶೋರ್

ನವದೆಹಲಿ: ನಾನು ಮಾಡಿದ್ದ ಕಾರ್ಯಕ್ಕೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ನಾನು ಮಾಡಿದ್ದು ಸರಿಯಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಹೇಳಿದ್ದಾರೆ.

ದೇಶದ ಸರ್ವೋಚ್ಛ ನ್ಯಾಯಾಲಯ ಸುಪ್ರೀಂ ಕೋರ್ಟ್ ನಲ್ಲಿ ಸೋಮವಾರ ಅಚ್ಚರಿಯೊಂದು ನಡೆದಿತ್ತು. ಹಿರಿಯ ವಕೀಲನೊಬ್ಬ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರತ್ತ ಶೂ ಎಸೆಯಲು ಪ್ರಯತ್ನಿಸಿದ್ದು, ನ್ಯಾಯಾಲಯದ ಒಳಗೆ ಕೆಲ ಕ್ಷಣ ತೀವ್ರ ಗೊಂದಲ ಉಂಟಾಗಿತ್ತು.

ಘಟನೆ ಬಳಿಕ ತಾಳ್ಮೆ ವಹಿಸಿ ಮಾತನಾಡಿದ ಸಿಜೆಐ, ಇದರಿಂದ ವಿಚಲಿತರಾಗಬೇಡಿ. ನಾವು ವಿಚಲಿತರಾಗಿಲ್ಲ. ಇಂತಹ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

ಇನ್ನು ಸಿಜೆಐ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಮಾತನಾಡಿ, ಶೂ ಎಸೆದಿದ್ದಕ್ಕೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ನಾನು ಮಾಡಿದ್ದು ಸರಿಯಿದೆ. ದೇವರೇ ನನ್ನನ್ನು ಪ್ರಚೋದಿಸಿದ್ದಾನೆ. ಮುಂದಿನ ಯಾವುದೇ ಪರಿಣಾಮ ಎದುರಿಸಲು ನಾನು ಸಿದ್ಧ. ನಾನು ಜೈಲಿಗೆ ಹೋಗುತ್ತೇನೆ. ಅಲ್ಲಿನ ದೇವರ ಹೆಸರಿನಲ್ಲೇ ಎಲ್ಲವನ್ನೂ ಸಹಿಸುತ್ತೇನೆಂದು ಹೇಳಿದ್ದಾರೆ.

ಮಧ್ಯಪ್ರದೇಶದ ಯುನೆಸ್ಕೋ ವಿಶ್ವ ಪರಂಪರೆಗೆ ಸೇರ್ಪಡೆಯಾಗಿರುವ ಖಜುರಾಹೊ ದೇವಾಲಯ ಸಂಕೀರ್ಣದ ಭಾಗವಾಗಿರುವ ಜವಾರಿ ದೇವಾಲಯದಲ್ಲಿ ಏಳು ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ಪುನರ್ನಿರ್ಮಿಸಲು ಮತ್ತು ಮರುಸ್ಥಾಪಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸಿಜೆಐ ಗವಾಯಿ ನೇತೃತ್ವದ ಪೀಠ ವಜಾಗೊಳಿಸಿತ್ತು.

ಈ ಪ್ರಕರಣ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಮೀಕ್ಷೆಯ (ASI) ವ್ಯಾಪ್ತಿಗೆ ಬರುತ್ತದೆಯೇ ಹೊರತು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಏನೇ ಮಾಡುವುದರಿದ್ದರೂ ಎಎಸ್‌ಐ ಅನುಮತಿ ನೀಡಬೇಕಾಗಿದೆ. ಕ್ಷಮಿಸಿ ಎಂದು ತಿಳಿಸಿದ್ದರು.

ಸಂಪೂರ್ಣವಾಗಿ ಪ್ರಚಾರ ಹಿತಾಸಕ್ತಿಗಾಗಿ ಈ ಅರ್ಜಿಯನ್ನು ನೀವು ಸಲ್ಲಿಕೆ ಮಾಡಿದ್ದೀರಿ. ಹೋಗಿ ದೇವರಲ್ಲೇ ಏನಾದರೂ ಮಾಡುವಂತೆ ಬೇಡಿಕೊಳ್ಳಿ. ನೀವು ವಿಷ್ಣುವಿನ ಕಟ್ಟಾ ಭಕ್ತ ಎಂದು ಹೇಳುತ್ತೀರಿ. ಆದ್ದರಿಂದ ಈಗಲೇ ಹೋಗಿ ಪ್ರಾರ್ಥಿಸಿ ಮತ್ತು ಸ್ವಲ್ಪ ಧ್ಯಾನ ಮಾಡಿ ಎಂದು ಸಿಜೆಐ ಗವಾಯಿ ಹೇಳಿದ್ದರು.

ಮೊಘಲ್ ಆಕ್ರಮಣದ ಸಮಯದಲ್ಲಿ ವಿಗ್ರಹವು ವಿರೂಪಗೊಂಡಿದ್ದು, ಅದನ್ನು ಪುನಃಸ್ಥಾಪಿಸಲು ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದರೂ ಅದು ಅದೇ ಸ್ಥಿತಿಯಲ್ಲಿದೆ ಎಂದು ರಾಕೇಶ್ ದಲಾಲ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಏತನ್ಮಧ್ಯೆ, ರಾಜಕೀಯ ನಾಯಕರು, ವಕೀಲರು ಮತ್ತು ಕಾರ್ಯಕರ್ತರು ಸಿಜೆಐ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ದಾಳಿಯನ್ನು ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ, ಇದು "ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ" ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ತೆಲಂಗಾಣ ಸಿಎಂ ಎ ರೇವಂತ್ ರೆಡ್ಡಿ, ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ದಾಳಿಯನ್ನು ಖಂಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article