
ಉಡುಪಿಯ ಸೈಫುದ್ದೀನ್ ಕೊಲೆ ಪ್ರಕರಣ; ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ SP ಹರಿರಾಂ ಶಂಕರ್
>>ಹಣಕ್ಕಾಗಿಯೇ ಕೊಲೆ: ಪ್ರಾಥಮಿಕ ತನಿಖೆಯಿಂದ ಬಹಿರಂಗ
>>ಹತ್ಯೆಯ ಹಿಂದೆ ಇನ್ನಷ್ಟು ಮಂದಿಯ ಕೈವಾಡ
>>ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ ಪೊಲೀಸರು
ಉಡುಪಿ: ಎಕೆಎಂಎಸ್ ಬಸ್ ಮಾಲಕ ಹಾಗೂ ರೌಡಿಶೀಟರ್ ಸೈಫು ಯಾನೆ ಸೈಫುದ್ದೀನ್‌ನನ್ನು ಬಂಧಿತ ಮೂವರು ಆರೋಪಿಗಳನ್ನು ಬಳಸಿಕೊಂಡು ಕೆಲವರು ಕೊಲೆ ಮಾಡಿಸಿರುವುದು ತನಿಖೆಯಿಂದ ಬಹಿರಂಗವಾಗಿದೆ. ಹಣಕ್ಕಾಗಿಯೇ ಆರೋಪಿಗಳು ಈ ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಉಡುಪಿ ಎಸ್ಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿಗಳಾದ ಫೈಝಲ್, ಶರೀಫ್ ಹಾಗೂ ಶುಕೂರಿಗೆ ಸೈಫ್‌ನನ್ನು ಕೊಲೆ ಮಾಡಲು ವೈಯಕ್ತಿಕ ಕಾರಣಗಳಿದ್ದವು. ವಶಿಷ್ಟ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗ ಸೈಫ್ ಯಾವುದೇ ರೀತಿಯಲ್ಲೂ ನೆರವು ಮಾಡಿಲ್ಲ ಎಂಬ ಧ್ವೇಷ ಶುಕೂರು ಮತ್ತು ಶರೀಫ್‌ಗೆ ಇದ್ದರೆ, ಫೈಝಲ್‌ಗೆ ಸೈಫ್ ತನ್ನ ಪತ್ನಿ ಜೊತೆ ಸಂಪರ್ಕದಲ್ಲಿದ್ದ ಧ್ವೇಷವೂ ಇತ್ತು. ಇದನ್ನು ಇನ್ನು ಕೆಲವರು ಬಳಸಿಕೊಂಡು ಈ ಕೊಲೆ ಮಾಡಿಸಿದ್ದಾರೆ. ಹಣಕಾಸಿನ ವಿಚಾರವಾಗಿಯೇ ಈ ಕೊಲೆ ನಡೆಸಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದರು.
ಉಪಾಯವಾಗಿ ಹತ್ಯೆ ನಡೆಸಿದ ಹಂತಕರು
ಸೈಫ್‌ನನ್ನು ಮಣಿಪಾಲ ಮನೆಯಿಂದ ಕೊಡವೂರು ಮನೆಗೆ ಫೈಝಲ್ ಕರೆದುಕೊಂಡು ಬರುವಾಗ ಶುಕೂರು ಮತ್ತು ಶರೀಫ್, ಕೊಡವೂರು ಮನೆಯ ಶೆಡ್‌ನಲ್ಲಿ ಅಡಗಿ ಕುಳಿತಿದ್ದರು. ಸೈಫ್ ಮನೆಯೊಳಗೆ ಹೋಗುತ್ತಿದ್ದಂತೆ ಈ ಮೂವರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಹಲವು ತಿಂಗಳಿನಿಂದ ಹತ್ಯೆಗೆ ಸ್ಕೆಚ್
ಈ ಕೊಲೆ ಇವರು ಹಲವು ತಿಂಗಳಿನಿಂದ ಸಂಚು ನಡೆಸುತ್ತಿದ್ದರು. ಕಳೆದ ಎರಡು ತಿಂಗಳ ಹಿಂದೆ ಇದನ್ನು ಅಂತಿಮಗೊಳಿಸಿದ್ದರು. ಇವರಿಗೆ ಸೈಫ್ ಮೇಲೆ ವೈಯಕ್ತಿಕ ಧ್ವೇಷಗಳಿದ್ದರೂ ಇದು ಸಿಟ್ಟಿನಿಂದ ಮಾಡಿದ ಕೃತ್ಯ ಅಲ್ಲ. ಇವರೆಲ್ಲ ಸೇರಿ ಪೂರ್ವಯೋಜಿತವಾಗಿ ಹಣಕಾಸಿನ ವಿಚಾರದಲ್ಲಿ ಸೈಫ್‌ನನ್ನು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದರು.
ಹತ್ಯೆ ಹಿಂದೆ ಫೈಝಲ್ ಪತ್ನಿ ರಿಧಾ ಭಾಗಿ
ಈ ಪ್ರಕರಣದಲ್ಲಿ ಸಂಚು ರೂಪಿಸಿದ ಆರೋಪದಲ್ಲಿ ಫೈಝಲ್ ಪತ್ನಿ ರಿಧಾಳನ್ನು ಕೂಡ ಬಂಧಿಸಲಾಗಿದೆ. ಇದರಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವುದು ಕಂಡುಬಂದಿದೆ. ಸದ್ಯ ತನಿಖೆ ಮುಂದುವರೆದಿದೆ. ಸಂಚಿನಲ್ಲಿ ಭಾಗಿಯಾಗಿದ್ದ ಎಲ್ಲರನ್ನು ಬಂಧಿಸಿ ಕಾನೂನು ಕ್ರಮ ಜರಗಿಸಲಾಗುವುದು ಎಂದು ಅವರು ತಿಳಿಸಿದರು.
ಹತ್ಯೆಗೆ ಪತ್ನಿ ರಿಧಾ ಶಭಾನಳನ್ನು ಬಳಸಿಕೊಂಡ ಪತಿ ಫೈಝಲ್!
ತನ್ನ ಪತ್ನಿ ರಿಧಾ ಶಭಾನಳಿಗೆ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಸೈಫ್‌ನನ್ನು ಕೊಲೆ ಮಾಡಿರುವುದಾಗಿ ಫೈಝಲ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಆದರೆ ತನಿಖೆ ನಡೆಸಿದಾಗ ರಿಧಾ ಮತ್ತು ಸೈಫ್ ಮಧ್ಯೆ ಸಾಕಷ್ಟು ಚಾಟಿಂಗ್, ಫೋನ್ ಕರೆಗಳು ನಡೆದಿರುವುದು ಕಂಡುಬಂದಿದೆ. ಸೈಫ್ ಆಕೆಗೆ ಕಿರುಕುಳ ನೀಡುತ್ತಿದ್ದ ಎಂಬುದು ತನಿಖೆಯಿಂದ ಕಂಡು ಬಂದಿಲ್ಲ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಕೊಲೆ ನಡೆದ ಸೆ.27ರಂದು ಬಸ್ಸಿನ ವ್ಯವಹಾರದ ಕುರಿತು ಮಾತನಾಡಲು ಮಂಗಳೂರಿಗೆ ಹೊರಟ ಸೈಫ್ ಮನೆಗೆ ಬಂದ ಫೈಝಲ್, ತನ್ನ ಪತ್ನಿ ರಿಧಾ ಕೊಡವೂರಿನ ಮನೆಯಲ್ಲಿ ನಿನಗಾಗಿ ಕಾಯುತ್ತಿದ್ದಾಳೆ ಎಂದು ಸುಳ್ಳು ಹೇಳಿ ಕೊಡವೂರಿನ ಮನೆಗೆ ಕರೆದುಕೊಂಡು ಹೋಗಿದ್ದನು. ದಾರಿ ಮಧ್ಯೆ ಇದನ್ನು ಧೃಢಪಡಿಸಲು ಸೈಫ್, ಆಕೆಗೆ ಫೋನ್‌ನಲ್ಲಿ ಕರೆ ಕೂಡ ಮಾಡಿದ್ದನು. ಆ ವೇಳೆ ರಿಧಾ, ನಾನು ಕೊಡವೂರು ಮನೆಗೆ ಬರುತ್ತಿದ್ದೇನೆ ಎಂದು ಹೇಳಿದ್ದಾಳೆ. ಅದನ್ನು ನಂಬಿ ಸೈಫ್ ಕೊಡವೂರು ಮನೆಗೆ ಹೋಗಿದ್ದಾನೆ ಎಂದು ಅವರು ತಿಳಿಸಿದರು.
ಕನಿಷ್ಠ ಒಂದು ವರ್ಷದಿಂದ ಸೈಫ್ ಮತ್ತು ರಿಧಾಳ ಮಧ್ಯೆ ಮಾತುಕತೆ ನಡೆಯುತ್ತಿತ್ತು. ಇದೇ ವಿಚಾರವಾಗಿ ತನ್ನ ಪತ್ನಿಯನ್ನೇ ಬಳಸಿಕೊಂಡು ಫೈಝಲ್ ಈ ಕೃತ್ಯ ಎಸಗಿದ್ದಾನೆ. ಸಂಚಿನಲ್ಲಿ ಫೈಝಲ್ ಮತ್ತು ಆತನ ಪತ್ನಿ ಇಬ್ಬರೂ ಭಾಗಿಯಾಗಿದ್ದಾರೆ ಎಂದರು.