
ಮುಖ್ಯ ನ್ಯಾಯಮೂರ್ತಿ ಗವಾಯಿ ಮೇಲೆ 'ಶೂ ಎಸೆತ': ಘಟನೆ ಎಲ್ಲಾ ಭಾರತೀಯರನ್ನು ಕೆರಳಿಸಿದೆ: ಪ್ರಧಾನಿ ಮೋದಿ ಖಂಡನೆ
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (CJI) ಬಿಆರ್ ಗವಾಯಿ ಮೇಲೆ ಶೂ ಎಸೆತ ಘಟನೆ ದೇಶಾದ್ಯಂತ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಧ್ವನಿಗೂಡಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಬಿ.ಆರ್. ಗವಾಯಿ ಜೊತೆಗೆ ಮಾತನಾಡಿರುವುದಾಗಿ ಪ್ರಧಾನಿ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ನಲ್ಲಿ ಸೋಮವಾರ ಬೆಳಗ್ಗೆ ನಡೆದ ಘಟನೆ ಎಲ್ಲಾ ಭಾರತೀಯರನ್ನು ಕೆರಳಿಸಿದೆ. ನಮ್ಮ ಸಮಾಜದಲ್ಲಿ ಇಂತಹ ಖಂಡನೀಯ ಕೃತ್ಯಗಳು ನಡೆಯಬಾರದು. ಇದು ಸಂಪೂರ್ಣ ಖಂಡನೀಯವಾದದ್ದು ಎಂದಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ನ್ಯಾಯಮೂರ್ತಿ ಗವಾಯಿ ಅವರು ತೋರಿದ ಶಾಂತತೆಯನ್ನು ನಾನು ಮೆಚ್ಚಿದ್ದೇನೆ. ಇದು ನ್ಯಾಯದ ಮೌಲ್ಯಗಳಿಗೆ ಮತ್ತು ನಮ್ಮ ಸಂವಿಧಾನದ ಆತ್ಮವನ್ನು ಬಲಪಡಿಸುವ ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ 71 ವರ್ಷದ ವಕೀಲ ವಿಚಾರಣೆಯ ವೇಳೆ ಸಿಜೆಐ ಗವಾಯಿ ಅವರತ್ತ ಶೂ ಎಸೆದ ಘಟನೆ ನಡೆದಿದೆ. ಕೋರ್ಟ್ ಸಿಬ್ಬಂದಿ ಅವರನ್ನು ತಕ್ಷಣ ವಶಕ್ಕೆ ಪಡೆದು ಹೊರಗೆ ಕರೆದೊಯ್ದರು. ಹೊರಗೆ ಕರೆದೊಯ್ಯುವಾಗ ಆತ “ಭಾರತ ಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲ” ಎಂದು ಕೂಗಿದ್ದ ಎನ್ನಲಾಗಿದೆ.
ಘಟನೆ ನಡೆದಾಗ ಮಧ್ಯಪ್ರದೇಶದಲ್ಲಿ ಹಾನಿಗೊಂಡ ವಿಷ್ಣು ವಿಗ್ರಹದ ಪುನಃಸ್ಥಾಪನೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.