
ರಷ್ಯಾದಿಂದ ತೈಲ ಖರೀದಿ ಪ್ರಕ್ರಿಯೆಯನ್ನು ಭಾರತ ಹಿಂಪಡೆಯುತ್ತಿದೆ: ಮೋದಿ ಜೊತೆ ಚರ್ಚಿಸಿರುವುದಾಗಿ ಹೇಳಿದ ಟ್ರಂಪ್
ವಾಷಿಂಗ್ಟನ್: ಅಮೆರಿಕದ ಶಕ್ತಿಕೇಂದ್ರ ವಾಷಿಂಗ್ಟನ್ ನಲ್ಲಿರುವ ಶ್ವೇತಭವನದ ಓವಲ್ ಕಚೇರಿಯಲ್ಲಿ ಅನಿವಾಸಿ ಭಾರತೀಯರೊಂದಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೀಪಾವಳಿ ಹಬ್ಬ ಆಚರಿಸಿ ಸಂಭ್ರಮಪಟ್ಟಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ರಷ್ಯಾದ ತೈಲ ಆಮದು ಮಾಡಿಕೊಳ್ಳುವ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಿರುವುದಾಗಿ ಮತ್ತೊಮ್ಮೆ ಹೇಳಿಕೊಂಡಿದ್ದಾರೆ.
ಉಭಯ ದೇಶಗಳಾದ ಭಾರತ ಮತ್ತು ರಷ್ಯಾ ಕೆಲವು ಉತ್ತಮ ಒಪ್ಪಂದಗಳ ಮೇಲೆ ಕೆಲಸ ಮಾಡುತ್ತಿವೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದರು. ಪ್ರಧಾನಿ ಮೋದಿ ಅವರೊಂದಿಗೆ "ಉತ್ತಮ ಸಂಬಂಧ" ಹೊಂದಿದ್ದಾರೆ ಎಂದು ಒತ್ತಿ ಹೇಳಿದರು. ನಾನು ಭಾರತದ ಜನರನ್ನು ಪ್ರೀತಿಸುತ್ತೇನೆ. ನಮ್ಮ ದೇಶಗಳ ನಡುವೆ ಕೆಲವು ಉತ್ತಮ ಒಪ್ಪಂದಗಳ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆ. ಇಂದು ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದೇನೆ ನಮ್ಮ ಮಧ್ಯೆ ಉತ್ತಮ ಸಂಬಂಧವಿದೆ ಎಂದರು.
ರಷ್ಯಾದಿಂದ ತೈಲ ಖರೀದಿಸುವುದಿಲ್ಲ
ಭಾರತ ರಷ್ಯಾದಿಂದ ಹೆಚ್ಚು ತೈಲ ಖರೀದಿಸುವುದಿಲ್ಲ. ಭಾರತ ಹಾಗೂ ಪ್ರಧಾನಿ ಮೋದಿ ಕೂಡ ನನ್ನಂತೆಯೇ ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳುವುದನ್ನು ನೋಡಲು ಬಯಸುತ್ತಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೊನೆಗೊಳ್ಳುವುದನ್ನು ನೋಡಲು ಅವರು ಬಯಸುತ್ತಾರೆ. ಅವರು ಹೆಚ್ಚು ತೈಲ ಖರೀದಿಸುವುದಿಲ್ಲ. ತೈಲ ಖರೀದಿ ಪ್ರಕ್ರಿಯೆಯನ್ನು ಭಾರತ ಹಿಂಪಡೆಯುತ್ತಿದೆ ಎಂದರು.
ಪ್ರಧಾನಿ ಮೋದಿ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಅಮೆರಿಕ ಅಧ್ಯಕ್ಷರು ದೂರವಾಣಿ ಕರೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದಾಗ್ಯೂ ತೈಲ ಖರೀದಿಯ ಬಗ್ಗೆ ಯಾವುದೇ ಉಲ್ಲೇಖಿಸಿಲ್ಲ. ಅಧ್ಯಕ್ಷ ಟ್ರಂಪ್ ಅವರೇ ನಿಮ್ಮ ಫೋನ್ ಕರೆ ಮತ್ತು ದೀಪಾವಳಿ ಶುಭಾಶಯಗಳಿಗೆ ಧನ್ಯವಾದಗಳು. ಈ ಬೆಳಕಿನ ಹಬ್ಬದಂದು, ನಮ್ಮ ಎರಡು ಮಹಾನ್ ಪ್ರಜಾಪ್ರಭುತ್ವಗಳು ಭರವಸೆಯಿಂದ ಜಗತ್ತನ್ನು ಬೆಳಗಿಸುವುದನ್ನು ಮುಂದುವರಿಸಲಿ ಮತ್ತು ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ನಾವೆಲ್ಲರೂ ಒಗ್ಗಟ್ಟಿನಿಂದ ನಿಲ್ಲೋಣ ಎಂದು ಹೇಳಿದ್ದಾರೆ.
ಕಳೆದ ಅಕ್ಟೋಬರ್ 18 ರಂದು, ಶ್ವೇತಭವನದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ದ್ವಿಪಕ್ಷೀಯ ಭೋಜನಕೂಟವನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷರು, ಭಾರತವು ರಷ್ಯಾದಿಂದ ತೈಲ ಆಮದುಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ, ಈಗ ಸಂಪೂರ್ಣವಾಗಿ ಹಿಂದೆ ಸರಿಯುತ್ತಿದೆ ಎಂದು ಹೇಳಿದ್ದರು.