ಬೆಂಗಳೂರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; ಮೂವರ ಬಂಧನ
ಬೆಂಗಳೂರು: ಪಶ್ಚಿಮ ಬಂಗಾಳ ಮೂಲದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಕಾರ್ತಿಕ್, ಗ್ಲೆನ್, ಸಿಯೋಗ್ ಎಂದು ಗುರುತಿಸಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡನಹಳ್ಳಿಯಲ್ಲಿ ಆರೋಪಿಗಳು ಕೃತ್ಯವೆಸಗಿದ್ದರು.
ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಹೇಳಿದ್ದೇನು...?
ಕೇಸ್ ಕುರಿತಾಗಿ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಪ್ರತಿಕ್ರಿಯಿಸಿದ್ದು, ಮಂಗಳವಾರ ರಾತ್ರಿ ಮಾದನಾಯಕನ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಒಟ್ಟು ಐವರು ಆರೋಪಿಗಳು ಮೂರು ಮನೆಯಲ್ಲಿ ವಾಸವಾಗಿದ್ದ ಪಶ್ಚಿಮ ಬಂಗಾಳದ ಮಹಿಳೆ ಮನೆಗೆ ನುಗ್ಗಿದ್ದಾರೆ. ಇಬ್ಬರು ಗಂಡಸರನ್ನ ಕಟ್ಟಿ ಹಾಕಿ, ಬಳಿಕ ಹಲ್ಲೆ ಮಾಡಿ ಅತ್ಯಾಚಾರ ಮಾಡಲಾಗಿದೆ. ಘಟನೆ ಬೆಳಕಿಗೆ ಬಂದ ಬಳಿಕ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದೇವೆ. ಗ್ಯಾಂಗ್ ರೇಪ್ ಹಾಗೂ ರಾಬರಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಘಟನೆಯಲ್ಲಿ ಹಲ್ಲೆಗೊಳಗಾದ ಇಬ್ಬರು ಪುರುಷರಿಗೆ ನಿಮಾನ್ಸ್ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಹಿಳೆಯ ಬಳಿ ಇರುವ ಮೊಬೈಲ್ ಹಾಗೂ 50 ಸಾವಿರ ರೂ. ನಗದು ದೋಚಿಕೊಂಡು ಹೋಗಿದ್ದಾರೆ. ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತಿಬ್ಬರಿಗಾಗಿ ಮೂರು ತಂಡಗಳನ್ನ ಮಾಡಿ ಹುಡುಕಾಟ ಮಾಡಲಾಗುತ್ತಿದೆ ಎಂದರು.
ಪ್ರಕರಣ ಗಂಭೀರವಾಗಿರುವುದರಿಂದ ಡಿವೈಎಸ್ ನೆಲಮಂಗಲದ ಅಧಿಕಾರಿಯಿಂದ ತನಿಖೆ ಮಾಡಿಸಲಾಗುತ್ತಿದೆ. ಕೆಲವರ ಫೋಟೋ ತೋರಿಸಿದಾಗ ಹೆಸರು ಸಮೇತವಾಗಿ ಹೇಳುತ್ತಿದ್ದಾರೆ. ಹಾಗಾಗಿ ಅವರಿಗೆ ಪರಿಚಯ ಇದ್ದಾರಾ, ಇಲ್ಲವಾ ಎನ್ನುವುದನ್ನು ನೋಡಬೇಕು ಎಂದು ಎಸ್ಪಿ ಹೇಳಿದ್ದಾರೆ.
ಘಟನೆ ಹಿನ್ನೆಲೆ
ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡನಹಳ್ಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆ ಮನೆಗೆ ರಾತ್ರೋರಾತ್ರಿ ಐವರು ಆರೋಪಿಗಳು ನುಗ್ಗಿದ್ದಾರೆ. ಪೀಣ್ಯ ಪೊಲೀಸರ ಇನ್ಫರ್ಮರ್ಸ್ ಎಂದು ಮನೆಗೆ ನುಗ್ಗಿದ್ದ ಆರೋಪಿಗಳು, ನಿಮ್ಮ ಮನೆಯಲ್ಲಿ ಗಾಂಜಾ ಮಾರಾಟ, ವೇಶ್ಯಾವಾಟಿಕೆ ನಡೆಸ್ತಿದ್ದೀರೆಂದು ದಾಳಿ ಮಾಡಿದ್ದಾರೆ.
ಸಂತ್ರಸ್ತ ಮಹಿಳೆಯ 14 ವರ್ಷದ ಮಗ ಸೇರಿದಂತೆ ಸಂತ್ರಸ್ತೆ ಸ್ನೇಹಿತೆ ಮೇಲೂ ಹಲ್ಲೆ ಮಾಡಿದ್ದಾರೆ. ಹಲ್ಲೆ ಬಳಿಕ ಪಕ್ಕದ ಮನೆಯ ರೂಂಗೆ ಎಳೆದೊಯ್ದು ರೇಪ್ ಮಾಡಿದ್ದರು. ಘಟನೆಯ ವೇಳೆ ಸಂತ್ರಸ್ತ ಮಹಿಳೆಯ ಪುತ್ರ 112ಗೆ ಕರೆ ಮಾಡಿದ್ದ. ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದರು. ಇಬ್ಬರ ಗುರುತು ಹಿಡಿದು ಪೊಲೀಸರಿಗೆ ಸಂತ್ರಸ್ತೆ ಕುಟುಂಬ ಮಾಹಿತಿ ನೀಡಿದ್ದು ಸದ್ಯ ಮೂವರನ್ನು ಬಂಧಿಸಲಾಗಿದೆ.