ಕಣ್ಮನ ಸೆಳೆಯುತ್ತಿರುವ 'ಉಡುಪಿ ಉಚ್ಚಿಲ ದಸರಾ'; ಜಗಮಗಿಸುತ್ತಿರುವ ವಿದ್ಯುತ್ ದೀಪಾಲಂಕಾರ
ಫೋಟೋ: ಸಚಿನ್ ಉಚ್ಚಿಲ
ಉಚ್ಚಿಲ: ಕರಾವಳಿ ಕರ್ನಾಟಕದ ನಾಡಹಬ್ಬವೆಂದೇ ಬಿಂಬಿತವಾಗುತ್ತಿರುವ 'ಉಡುಪಿ ಉಚ್ಚಿಲ ದಸರಾ'ದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ದಸರಾ ದೀಪಾಲಂಕಾರಕ್ಕೆ ಜನ ಫೀದಾ ಆಗುತ್ತಿದ್ದಾರೆ.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ 4ನೇ ವರ್ಷದ ಈ ಬಾರಿಯ ದಸರಾವನ್ನು ದ.ಕ.ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ.ಜಿ.ಶಂಕರ್ ಮಾರ್ಗದರ್ಶನದಲ್ಲಿ ಅಧ್ಯಕ್ಷ ಜಯ ಸಿ.ಕೋಟ್ಯಾನ್ ನೇತೃತ್ವದಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತಿದೆ.
ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೇ 'ಉಡುಪಿ ಉಚ್ಚಿಲ ದಸರಾ' ನಡೆಯುತ್ತಿರುವುದು ಈ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಕೈಬೀಸಿ ಕರೆವಂತಾಗಿದೆ. ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ದಸರಾ ಕೊನೆಯ ಹಂತಕ್ಕೆ ಬಂದು ತಲುಪಿದ್ದು, ಜನಜಂಗುಳಿಯಿಂದ ಗಿಜಿಗುಡುತ್ತಿದೆ.
ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳ 11 ಕಿ.ಮೀ. ದೂರದವರೆಗೂ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಉಚ್ಚಿಲದಿಂದ ಪಡುಬಿದ್ರಿವರೆಗೆ, ಪಡುಬಿದ್ರಿಯಿಂದ ಕಾಪು ಜಂಕ್ಷನ್, ಕೊಪ್ಪಲಂಗಡಿಯಿಂದ ಕಾಪು ಬೀಚ್‌ವರೆಗೆ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಈ ಸೊಬಗನ್ನು ಸವಿಯಲು ಜನ ಸಾಗರವೇ ಹರಿದು ಬರುತ್ತಿದೆ.