ದೇಶದಲ್ಲಿ ಮೋದಿ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋಮಾಂಸ ರಫ್ತು; ಈ ಬಗ್ಗೆ ಆರೆಸ್ಸೆಸ್‌-ಮೋದಿಯಾಗಲಿ ಮಾತನಾಡುತ್ತಿಲ್ಲ: ದಯಾನಂದ ಸ್ವಾಮೀಜಿ ಆಕ್ರೋಶ

ದೇಶದಲ್ಲಿ ಮೋದಿ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋಮಾಂಸ ರಫ್ತು; ಈ ಬಗ್ಗೆ ಆರೆಸ್ಸೆಸ್‌-ಮೋದಿಯಾಗಲಿ ಮಾತನಾಡುತ್ತಿಲ್ಲ: ದಯಾನಂದ ಸ್ವಾಮೀಜಿ ಆಕ್ರೋಶ

ಉಡುಪಿ: ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರಕಾರದ ಗೋಮಾಂಸ ರಫ್ತು ಹಾಗೂ ಗೋಹತ್ಯೆ ನಿಷೇಧ ಮಾಡದ ಬಗ್ಗೆ ಟೀಕಿಸಿದ್ದ ನರೇಂದ್ರ ಮೋದಿ, ಮೂರು ಬಾರಿ ಪ್ರಧಾನಿಯಾದರೂ ಇನ್ನೂ ಯಾಕೆ ಗೋಹತ್ಯೆಯನ್ನು ದೇಶದಲ್ಲಿ ನಿಷೇಧ ಮಾಡುತ್ತಿಲ್ಲ. ದುರಂತ ಅಂದರೆ ಮೋದಿ ಅವಧಿಯಲ್ಲಿ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗೋಮಾಂಸ ರಫ್ತು ಆಗುತ್ತಿದೆ. ಭಾರತ ಗೋಮಾಂಸ ರಫ್ತಿನಲ್ಲಿ ಇಡೀ ಜಗತ್ತಿನಲ್ಲಿಯೇ ಇಂದು ಎರಡನೇ ಸ್ಥಾನದಲ್ಲಿದೆ ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ, ಬೆಂಗಳೂರು ವಿಶ್ವ ಗೋರಕ್ಷಾ ಮಹಾಪೀಠದ ದಯಾನಂದ ಸ್ವಾಮೀಜಿ ಟೀಕಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಿಂದ ಪ್ರತಿನಿತ್ಯ ಲಕ್ಷಾಂತರ ಹಸು, ಕರು, ಎತ್ತು, ಎಮ್ಮೆ, ಕೋಣ ಮುಂತಾದ ಗೋವಂಶ ಪ್ರಾಣಿಗಳನ್ನು ಹತ್ಯೆ ಮಾಡಿ, ಅವುಗಳ ಮಾಂಸ ಮತ್ತು ಚರ್ಮವನ್ನು ವಿದೇಶಗಳಿಗೆ ರಫ್ತು ಮಾಡುತ್ತಿರುವುದು ಕಳವಳಕಾರಿಯಾಗಿದೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಸಂಘಪರಿವಾರ ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ತರುವಂತೆ ಹೋರಾಟ ಮಾಡಿತ್ತು. ಆದರೆ ಇಂದು ಅದೇ ಆರೆಸ್ಸೆಸ್‌ ವಿಚಾರಧಾರೆಯ ಮೋದಿ ಸರಕಾರ ಇದ್ದರೂ ಈವರೆಗೆ ಕೇಂದ್ರದಲ್ಲಿ ನಿಷೇಧ ಕಾಯಿದೆ ಜಾರಿಗೆ ತಂದಿಲ್ಲ. ಆರೆಸ್ಸೆಸ್‌ ಕೂಡ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ದೂರಿದರು.

ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳಿಗೆ ಸಂಪೂರ್ಣ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಬಂದಿದೆ. ಬಿಜೆಪಿ ಸರಕಾರ ಇರುವ ಎಲ್ಲ ರಾಜ್ಯಗಳಲ್ಲಿ ನಿಷೇಧ ಮಾಡಲಾಗಿದೆ. ಆದರೆ ಇವರು ಯಾಕೆ ಕೇಂದ್ರದಲ್ಲಿ ಇದನ್ನು ನಿಷೇಧ ಮಾಡುತ್ತಿಲ್ಲ. ಆದುದರಿಂದ ಉಡುಪಿಗೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಶ್ರೀಕೃಷ್ಣನ ನಾಡಿನಲ್ಲಿ ಈ ಸಂಕಲ್ಪ ಮಾಡಬೇಕು ಈ ಸಂಬಂಧ ಪ್ರಧಾನಿಗೆ ಮನವಿ ಕೂಡ ಸಲ್ಲಿಸಲಾಗುವುದು ಎಂದರು.

ಅಹಿಂಸಾ ತತ್ವ ಬೋಧನೆ ಮಾಡಿದ ನಾವು ಕೋಟ್ಯಂತರ ಜಾನುವಾರುಗಳನ್ನು ಹತ್ಯೆ ಮಾಡಿ ಮಾಂಸ ರಫ್ತು ಮಾಡಿ, ಇಡೀ ಜಗತ್ತನ್ನೇ ಮಾಂಸಹಾರಿ ಮಾಡಲು ಹೊರಟಿದ್ದೇವೆ. ಭಾರತ ದೇಶ ಸಂಸ್ಕೃತಿ, ಪರಂಪರೆಯನ್ನು ಎತ್ತಿ ಹಿಡಿಯುವುದಾಗಿ ಹೇಳುವ ಪ್ರಧಾನಿ ಮೋದಿ, ಗೋವಂಶ ಜಾನುವಾರು ಮಾಂಸ ರಫ್ತು ನಿಲ್ಲಿಸುತ್ತಿಲ್ಲ. ಇನ್ನಾದರೂ ಪ್ರಧಾನಿ ವಿಶೇಷ ಕಾಳಜಿ ವಹಿಸಿ ಮಾಂಸ ರಫ್ತು ನಿಷೇಧ ಕಾಯಿದೆ ಜಾರಿಗೆ ತಂದು, ಭಾರತವನ್ನು ಮಾಂಸ ರಫ್ತು ಮುಕ್ತ ದೇಶ ಎಂಬುದಾಗಿ ಘೋಷಣೆ ಮಾಡಬೇಕು ಎಂದು ದಯಾನಂದ ಸ್ವಾಮೀಜಿ ಆಗ್ರಹಿಸಿದರು.


Ads on article

Advertise in articles 1

advertising articles 2

Advertise under the article