ಅದ್ದೂರಿಯಾಗಿ ನಡೆದ ಮಂಗಳೂರಿನ ಅಲ್ ಖಲಂ ಗ್ರೇಡ್ ಶಾಲೆಯ ಬಾಲಕ-ಬಾಲಕಿಯರ ಕ್ರೀಡೋತ್ಸವ
ಮಂಗಳೂರು: ಇಲ್ಲಿನ ಪಲ್ನೀರ್'ನ ಎಹಸಾನ್ ಮಸ್ಜಿದ್ ಬಿಲ್ಡಿಂಗ್'ನಲ್ಲಿರುವ ಅಲ್ ಖಲಂ ಗ್ರೇಡ್ ಶಾಲೆಯ ಕ್ರೀಡೋತ್ಸವವು ಉಳ್ಳಾಲದ ಗ್ರೀನ್ಸ್ ಫೀಲ್ಡ್‌ನಲ್ಲಿ ಅತ್ಯಂತ ಶಿಸ್ತಿನ ಹಾಗೂ ಉತ್ಸಾಹಭರಿತ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಶೂಫ್ ಬಿನ್ ಹನೀಫ್ ಅವರು ಉಪಸ್ಥಿತರಿದ್ದು, ಕ್ರೀಡಾತ್ಮಕತೆ ಹಾಗೂ ಶಿಸ್ತು ವಿದ್ಯಾರ್ಥಿಗಳ ಜೀವನದಲ್ಲಿ ಎಷ್ಟು ಮಹತ್ವವಿದೆ ಎಂಬುದರ ಕುರಿತು ಪ್ರೇರಣಾದಾಯಕ ಮಾತುಗಳನ್ನು ಹೇಳಿದರು.
ಸ್ವಾಗತ ಭಾಷಣವನ್ನು ಅಲ್ ಖಲಂ ಗ್ರೇಡ್ ಶಾಲೆಯ HOD ಆಯಾಜ್ ಅಬ್ದುಲ್ಲಾ ಅವರು ನೆರವೇರಿಸಿದರು. ಶಾಲೆಯ ಪ್ರಾಂಶುಪಾಲರಾದ ಅಬ್ದುಲ್ ಮತೀನ್ ಹಕೀಮ್ ಅವರು ಕ್ರೀಡೆ ಮತ್ತು ಶಿಸ್ತಿನ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗವನ್ನು ಉಪಪ್ರಾಂಶುಪಾಲರು ಮರೂಫ್ ಅವರು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದರು. ವಿವಿಧ ಆಟಗಳನ್ನು ಫರ್ಹಾನ್ ಅವರು ಯಶಸ್ವಿಯಾಗಿ ಆಯೋಜಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಶಿಸ್ತು ಪ್ರದರ್ಶಿಸಿ ಡ್ರಿಲ್ಲ್ಸ್ ಮತ್ತು ಮಾರ್ಚ್ ಪಾಸ್ಟ್ ಅನ್ನು ಮನಮುಟ್ಟುವ ರೀತಿಯಲ್ಲಿ ನೆರವೇರಿಸಿದರು. ಅವರ ಶಿಸ್ತು, ಏಕತೆ ಹಾಗೂ ಸಂಯೋಜನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮವು ಶಿಕ್ಷಕರು, ಪೋಷಕರು ಹಾಗೂ ಅತಿಥಿಗಳ ಉಪಸ್ಥಿತಿಯಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನವಾಯಿತು.
ಅಲ್ ಖಲಂ ಗ್ರೇಡ್ ಶಾಲೆ – ಬಾಲಕಿಯರ ವಾರ್ಷಿಕ ಕ್ರೀಡೋತ್ಸವ
ಅತ್ಯಂತ ಉತ್ಸಾಹಭರಿತ, ಸಂಭ್ರಮದ ವಾತಾವರಣದಲ್ಲಿ ಕಲ್ಲಾಪು ಪಟ್ಲದಲ್ಲಿರುವ ಅಲ್ ಖಲಂ ಗ್ರೇಡ್ ಶಾಲೆಯ 'ಬಾಲಕಿಯರ ವಾರ್ಷಿಕ ಕ್ರೀಡೋತ್ಸವ - 2025' ಡಿಸೆಂಬರ್ 24 ರಂದು ಲಿಟಲ್ ಮಂಗಳೂರು, ಕಲ್ಲಾಪುವಿನಲ್ಲಿ ಯಶಸ್ವಿಯಾಗಿ ನಡೆಯಿತು.
ಮೈದಾನವು ವಿದ್ಯಾರ್ಥಿನಿಯರ ಚೈತನ್ಯ, ಹರ್ಷೋದ್ಗಾರಗಳಿಂದ ಕೂಡಿದ್ದು, ಸ್ಪೂರ್ತಿದಾಯಕ ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದರು. ಬೆಳಗಿನ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಲಿಫಾಮ್ ಅಲ್ತಾಫ್ ಸುಂದರವಾಗಿ ನಡೆಸಿಕೊಟ್ಟರು. ಶಿಕ್ಷಕಿ ರಿಮ್ಷಾ ಅವರ ಹೃದಯಸ್ಪರ್ಶಿ ಕುರಾನ್ ಪಠನದ ಅನುವಾದವನ್ನು ಶಿಕ್ಷಕಿ ರಿಹಾಲಾರವರು ನಡೆಸಿ ಕೊಡುವ ಮೂಲಕ ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ಮೆರುಗು ನೀಡಿದರು. ಶಿಕ್ಷಕಿ ಶಮೀನಾ ರವರು ಅತಿಥಿಗಳನ್ನು ಸ್ವಾಗತಿಸಿದರು.
ಮುಖ್ಯ ಅತಿಥಿಗಳಾದ ಮೈಮೂನಾ ಯು.ಕೆ. ಹಾಗೂ ಗೌರವಾನ್ವಿತ ಅತಿಥಿಗಳಾದ ರೇಷ್ಮಾ, ಉಮ್ಮೆ ಹಾನಿ, ತನ್ಸೀರಾ ಮತ್ತು ಲುಬೈನಾ ಅವರು ತಮ್ಮ ಮಾತುಗಳಿಂದ ವಿದ್ಯಾರ್ಥಿನಿಯರಲ್ಲಿ ಸ್ಪೂರ್ತಿ ತುಂಬಿದರು.
ಅತ್ಯದ್ಭುತ ಶಿಸ್ತು ಮತ್ತು ಸಂಯೋಜನೆಯೊಂದಿಗೆ ಕೂಡಿದ್ದ ಡ್ರಿಲ್ ಸ್ಪರ್ಧೆಯ ಪ್ರಥಮ ಸ್ಥಾನವನ್ನು ಎಮರಾಲ್ಡ್ ಹೌಸ್ ಅಲಂಕರಿಸಿದರೆ ಸ್ಯಾಫೈರ್ ಹೌಸ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಬಳಿಕ ವಿದ್ಯಾರ್ಥಿನಿಯರ ವಯೋಮಾನದ ಆಧಾರದ ಮೇಲೆ ಐದು ಗುಂಪುಗಳಾಗಿ ವಿಂಗಡಿಸಿ ವಿವಿಧ ಕ್ರೀಡಾಸ್ಪರ್ಧೆಗಳನ್ನು ನಡೆಸಲಾಯಿತು. ಓಟದ ಸ್ಪರ್ಧೆ, ಗೋಣಿಚೀಲ ಓಟ, ಪ್ರಾಣಿ ಓಟ, ಆಮೆ ಓಟ, ಹೂಪ್ ರೇಸ್, ಮೂರು ಕಾಲಿನ ಓಟ, ಸ್ಕಿಪ್ ಮತ್ತು ಸ್ಪ್ರಿಂಟ್ ಮೊದಲಾದ ಸ್ಪರ್ಧೆಗಳು ಕ್ರಮಬದ್ಧವಾಗಿ ನಡೆದವು. ಮಧ್ಯಾಹ್ನದ ಪ್ರಾರ್ಥನೆ ಮತ್ತು ಭೋಜನ ವಿರಾಮದ ಬಳಿಕ ರೋಚಕ ಗುಂಪು ಆಟಗಳನ್ನು ಮುಂದುವರೆಸಲಾಯಿತು. ಜೂನಿಯರ್ಸ್ ವಿಭಾಗದಲ್ಲಿ ಡಾಜ್‌ಬಾಲ್, ಡಾಗ್ ಅಂಡ್ ದ ಬೋನ್ ಹಾಗೂ ಸೀನಿಯರ್ಸ್ ವಿಭಾಗದಲ್ಲಿ ಖೋ, ಕಬಡ್ಡಿ ಆಟಗಳನ್ನು ಆಯೋಜಿಸಲಾಗಿತ್ತು. ಡ್ರಿಲ್ ಮತ್ತು ಕ್ರೀಡಾಸ್ಪರ್ಧೆಗಳ ವಿಜೇತರಿಗೆ ಪದಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಚಾಂಪಿಯನ್ ಗರಿಯನ್ನು ತನ್ನ ಮುಡಿಗೇರಿಸಿಕೊಂಡ ಆಂಬರ್ ಹೌಸ್ ಎಲ್ಲರ ಶ್ಲಾಘನೆಗೆ ಪಾತ್ರವಾಯಿತು.