ಚಿತ್ರದುರ್ಗ: ಖಾಸಗಿ ಬಸ್‌ಗೆ ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ, ಹಲವಾರು ಗಂಭೀರ; ಘಟನೆ ಬಗ್ಗೆ ಬಸ್ ಚಾಲಕ ಹೇಳಿದ್ದೇನು...?
ಚಿತ್ರದುರ್ಗ: ಖಾಸಗಿ ಟ್ರಾವೆಲ್ ಬಸ್‌ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು, 9 ಮಂದಿ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಹಿರಿಯೂರಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.
ಖಾಸಗಿ ಸ್ಲೀಪರ್ ಕೋಚ್ ಬಸ್ ಬೆಂಗಳೂರಿನಿಂದ ಶಿವಮೊಗ್ಗದ ಮೂಲಕ ಗೋಕರ್ಣಕ್ಕೆ ಹೊರಟಿತ್ತು. ಈ ನಡುವೆ ಚಿತ್ರದುರ್ಗದ ಹಿರಿಯೂರಿನ ಜವನಗೊಂಡನಹಳ್ಳಿ ಎಂಬಲ್ಲಿ ದುರ್ಘಟನೆ ಸಂಭವಿಸಿದೆ.
ಡಿಕ್ಕಿ ಬಳಿಕ ಕಂಟೇನರ್ ಲಾರಿ ಹಾಗೂ ಬಸ್ ಎರಡೂ ಬೆಂಕಿ ಹೊತ್ತಿಕೊಂಡಿದ್ದು, ಬಸ್ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ.
ಬಸ್ ಚಾಲಕ ಮೊಹಮ್ಮದ್ ರಫೀಕ್ ಹೇಳಿದ್ದೇನು...?
ಲಾರಿ ಚಾಲಕನು ನಮ್ಮ ಬಸ್ನ ಡೀಸೆಲ್ ಟ್ಯಾಂಕ್ ಬಳಿ ಡಿಕ್ಕಿ ಹೊಡೆಸಿದ ಪರಿಣಾಮ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿತು ಎಂದು ಜಿಲ್ಲೆಯ ಹಿರಿಯೂರಿನ ಬಳಿ ಅಪಘಾತಕ್ಕೀಡಾದ ಖಾಸಗಿ ಬಸ್ ಚಾಲಕ ಮೊಹಮ್ಮದ್ ರಫೀಕ್ ಘಟನೆಯ ಬಗ್ಗೆ ತಿಳಿಸಿದ್ದಾರೆ.
ಬುಧವಾರ ತಡರಾತ್ರಿ 2 ಗಂಟೆ ಸುಮಾರಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಬಳಿಯ ಗೊರ್ಲತ್ತು ಕ್ರಾಸ್ ಬಳಿ ನಡೆದ ಖಾಸಗಿ ಬಸ್ ಹಾಗೂ ಕಂಟೇನರ್ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ 9 ಜನ ಅಸುನೀಗಿದ್ದಾರೆ. ಇವರಲ್ಲಿ ಲಾರಿ ಚಾಲಕ ಹಾಗೂ ಬಸ್ನಲ್ಲಿದ್ದ 8 ಮಂದಿ ಪ್ರಯಾಣಿಕರು ಸೇರಿದ್ದಾರೆ.
ಲಾರಿ ಚಾಲಕನ ಅಜಾಗರೂಕತೆಯಿಂದ ಘಟನೆ: ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸ್ ಚಾಲಕ ಮೊಹಮ್ಮದ್ ರಫೀಕ್ ಅವರನ್ನು ಮಾಧ್ಯಮಗಳು ಮಾತನಾಡಿಸಿದ್ದು, ಈ ವೇಳೆ ಅಪಘಾತದ ಚಿತ್ರಣವನ್ನು ತೆರೆದಿಟ್ಟಿದ್ದಾರೆ. "ಲಾರಿಯು ಬಸ್ನ ಡಿಸೇಲ್ ಟ್ಯಾಂಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ನಮ್ಮ ಬಸ್ನಲ್ಲಿ ಇಬ್ಬರು ಮಕ್ಕಳಿದ್ದರು. ಶಿವಮೊಗ್ಗ, ಕುಮಟಾ ಮೂಲಕ ಗೋಕರ್ಣಕ್ಕೆ ತೆರಳುತ್ತಿದ್ದೆವು. ದಾರಿ ಮಧ್ಯೆ, ಊಟ ಮುಗಿಸಿ ಪ್ರಯಾಣ ಮುಂದುವರೆಸಿದ್ದೆವು. ಆಗ ಲಾರಿ ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ" ಎಂದು ರಫೀಕ್ ತಿಳಿಸಿದರು.
ಅಪಘಾತದ ಭಯಾನಕ ಘಟನೆಯನ್ನು ಬಸ್ ಕ್ಲೀನರ್ ಮೊಹಮ್ಮದ್ ಸಾದಿಕ್ ವಿವರಿಸಿದ್ದು, "ಬಸ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ, ನಾನು ಗ್ಲಾಸ್ ಒಡೆದು ಬಸ್ನಿಂದ ಜಿಗಿದು ಹೊರಬಂದೆ. ಕೆಲವು ಪ್ರಯಾಣಿಕರನ್ನು ಉಳಿಸಲು ಸಾಧ್ಯವಾಗಲಿಲ್ಲ" ಎಂದರು.
ಏನಾಯಿತು ಎಂಬುದೇ ನನಗೆ ಗೊತ್ತಾಗಲಿಲ್ಲ: "ರಾತ್ರಿ 1.30ರಿಂದ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಾತ್ರಿ ನಾನು ಮಲಗಿದ್ದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ ನೋಡ ನೋಡುತ್ತಿದ್ದಂತೆ ಧಗಧಗನೆ ಹೊತ್ತಿ ಉರಿದಿದೆ. ಸ್ಥಳೀಯರು ನಮ್ಮ ಸಹಾಯಕ್ಕೆ ಬಂದರು. ಅಪಘಾತವಾಗುತ್ತಿದ್ದಂತೆ ಏನಾಗಿದೆ ಎನ್ನುವುದು ಗೊತ್ತಾಗದೆ ನಾವು ಶಾಕ್ನಲ್ಲಿ ಇದ್ದೆವು. ಲಾರಿ ಅಪ್ಪಳಿಸಿದ ಪರಿಣಾಮ ಡ್ರೈವರ್ ಕೂಡ ಬಸ್ನಲ್ಲಿ ಸಿಲುಕಿದ್ದ. ಆತನ ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ. ಅಪಘಾತ ಆದಾಗ ಬಸ್ನ ಗ್ಲಾಸ್ ಒಡೆದಿತ್ತು. ನಾನು ಕೂಡ ಹಾರಿ ಹೊರಗೆ ಬಿದ್ದಿದ್ದೆ. ಅಪಘಾತ ಆಗಿದ್ದೇ ತಡ ಏನಾಯಿತು ಎಂಬುದೇ ನನಗೆ ಗೊತ್ತಾಗಲಿಲ್ಲ. ಜನ ಧಾವಿಸಿ ರಕ್ಷಣೆ ಮಾಡಿ, ಆಸ್ಪತ್ರೆಗೆ ಸೇರಿಸಿದರು" ಎಂದು ಸಾದಿಕ್ ವಿವರಿಸಿದರು.
ಅಪಘಾತಕ್ಕೀಡಾದ ಖಾಸಗಿ ಬಸ್ ಮಾಲೀಕ ನಾಗರಾಜಯ್ಯ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ನಮ್ಮ ಬಸ್ ಚಾಲಕನನ್ನು ಮಾತನಾಡಿಸಲು ಆಗಿಲ್ಲ. ಅಪಘಾತದಿಂದ ಶಾಕ್ಗೆ ಒಳಗಾಗಿದ್ದಾನೆ. ಅವನನ್ನು ಹುಬ್ಬಳ್ಳಿ ಆಸ್ಪತ್ರೆಗೆ ರವಾನಿಸಬೇಕಿದೆ. ನಮ್ಮ ಬಸ್ ಕ್ಲೀನರ್ ಜೊತೆಗೆ ಮಾತನಾಡಿ ಮಾಹಿತಿ ಪಡೆದಿದ್ದೇನೆ. ಗಾಯಾಳುಗಳು ಆಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಬಸ್ನಲ್ಲಿದ್ದ ಪ್ರಯಾಣಿಕರ ಪೈಕಿ 25 ಜನ ಗೋಕರ್ಣಕ್ಕೆ, ಇಬ್ಬರು ಶಿವಮೊಗ್ಗ ಹಾಗೂ ಇಬ್ಬರು ಕುಮಟಾಕ್ಕೆ ಟಿಕೆಟ್ ಬುಕ್ ಮಾಡಿದ್ದರು'' ಎಂದರು.
ಘಟನೆ ಬಗ್ಗೆ ಮಾಹಿತಿ ನೀಡಿದ ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಅವರು ''12 ಜನ ಗಾಯಳುಗಳು ಹಿರಿಯೂರು ಆಸ್ಪತ್ರೆ, 9 ಜನ ಶಿರಾ ಆಸ್ಪತ್ರೆ ಹಾಗೂ ಮೂವರು ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಪ್ರಯಾಣಿಕನಿಗೆ ಹೆಚ್ಚು ಸುಟ್ಟ ಗಾಯಗಳಾದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಆಗಿರುವ ಪ್ರಯಾಣಿಕನ ಹೊರತಾಗಿ ಒಟ್ಟು 24 ಜನರು ಪ್ರಾಣಪಾಯದಿಂದ ಪಾರಾಗಿದ್ದಾರೆ'' ಎಂದು ಹೇಳಿದರು.