ಕೆನಡಾದ ಟೊರೊಂಟೊ ವಿವಿ ಕ್ಯಾಂಪಸ್ ನಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ!
ಕೆನಡಾದ ಟೊರೊಂಟೊ ವಿಶ್ವವಿದ್ಯಾಲಯದ ಸ್ಕಾರ್ಬರೋ ಕ್ಯಾಂಪಸ್ ಬಳಿ 20 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಡಾಕ್ಟರೇಟ್ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಗುಂಡೇಟಿನ ಗಾಯದಿಂದ ಪತ್ತೆಯಾಗಿದ್ದು, ಈ ವರ್ಷ ಟೊರೊಂಟೊದಲ್ಲಿ ನಡೆದ 41ನೇ ಕೊಲೆ ಪ್ರಕರಣ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ 20 ವರ್ಷದ ಭಾರತೀಯ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಮತ್ತು 30 ವರ್ಷದ ಮಹಿಳೆ ಹಿಮಾಂಶಿ ಖುರಾನಾ ಹತ್ಯೆಗೀಡಾಗಿದ್ದಾರೆ. ಶಿವಾಂಕ್ ಅವಸ್ಥಿ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದಾರೆ. ಭಾರತದ ಕಾನ್ಸುಲೇಟ್ ಎರಡೂ ಪ್ರಕರಣಗಳಲ್ಲಿ ಸಂತಾಪ ವ್ಯಕ್ತಪಡಿಸಿ, ಕುಟುಂಬಕ್ಕೆ ಅಗತ್ಯ ಸಹಾಯ ನೀಡುತ್ತಿದೆ ಎಂದು ಹೇಳಿದೆ.
ಶಿವಾಂಕ್ ಅವಸ್ಥಿ ಡಾಕ್ಟರೇಟ್ ವಿದ್ಯಾರ್ಥಿಯಾಗಿದ್ದರು. ಮಧ್ಯಾಹ್ನ ಸುಮಾರು 3:34ಕ್ಕೆ ಹೈಲ್ಯಾಂಡ್ ಕ್ರೀಕ್ ಟ್ರೈಲ್ ಮತ್ತು ಓಲ್ಡ್ ಕಿಂಗ್‌ಸ್ಟನ್ ರಸ್ತೆ ಪ್ರದೇಶದಲ್ಲಿ ಎಮೆರ್ಜೆನ್ಸಿ ಕರೆ ಬಂದಿದ್ದರಿಂದ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅಲ್ಲಿ ಗಂಭೀರ ಗುಂಡಿನ ಗಾಯಗಳೊಂದಿಗೆ ಶಿವಾಂಕ್ ಅವಸ್ಥಿ ಬಿದ್ದಿದ್ದರು. ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ಪೊಲೀಸರು ಅಧಿಕೃತ ಹೇಳಿಕೆ ನೀಡಿ, "ಪೊಲೀಸರು ಬರುವ ಮೊದಲೇ ಶಂಕಿತರು ಪ್ರದೇಶದಿಂದ ಪರಾರಿಯಾಗಿದ್ದಾರೆ" ಎಂದು ಹೇಳಿದ್ದಾರೆ. ಆರೋಪಿಯನ್ನು ಬಂಧಿಸಲು ಸಾರ್ವಜನಿಕರ ಸಹಾಯ ಕೋರಿದ್ದಾರೆ. ಶಿವಾಂಕ್ ಅವಸ್ಥಿ ಸಾವಿಗೆ ಭಾರತೀಯ ಕಾನ್ಸುಲೇಟ್ ತೀವ್ರ ದುಃಖ ವ್ಯಕ್ತಪಡಿಸಿದೆ.
ಟೊರೊಂಟೊ ವಿಶ್ವವಿದ್ಯಾಲಯದ ಸ್ಕಾರ್ಬರೋ ಕ್ಯಾಂಪಸ್ ಬಳಿ ನಡೆದ ಮಾರಣಾಂತಿಕ ಗುಂಡಿನ ದಾಳಿಯಲ್ಲಿ ಯುವ ಭಾರತೀಯ ಡಾಕ್ಟರೇಟ್ ವಿದ್ಯಾರ್ಥಿ ಶ್ರೀ ಶಿವಾಂಕ್ ಅವಸ್ಥಿ ಅವರ ದುರಂತ ಸಾವಿನ ಬಗ್ಗೆ ನಾವು ತೀವ್ರ ದುಃಖ ವ್ಯಕ್ತಪಡಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬದೊಂದಿಗೆ ಕಾನ್ಸುಲೇಟ್ ಸಂಪರ್ಕದಲ್ಲಿದೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಅಗತ್ಯ ಸಹಾಯ ನೀಡುತ್ತಿದೆ" ಎಂದು ತಿಳಿಸಿದೆ.