ಬಹರೈನ್‌ನಲ್ಲಿ ಕನ್ನಡ ಸಂಘದಿಂದ 'ಕನ್ನಡ ವೈಭವ 2025; ಭಾಷೆ, ಸಂಸ್ಕೃತಿ ಮತ್ತು ಏಕತೆಯ ಮಹೋತ್ಸವ

ಬಹರೈನ್‌ನಲ್ಲಿ ಕನ್ನಡ ಸಂಘದಿಂದ 'ಕನ್ನಡ ವೈಭವ 2025; ಭಾಷೆ, ಸಂಸ್ಕೃತಿ ಮತ್ತು ಏಕತೆಯ ಮಹೋತ್ಸವ

ಮನಾಮ(ಬಹರೈನ್):  ಕನ್ನಡ ಸಂಘ ಬಹರೈನ್ ಆಯೋಜಿಸಿದ “ಕನ್ನಡ ವೈಭವ 2025” ಕಾರ್ಯಕ್ರಮವು ಇತ್ತೀಚಿಗೆ ಬಹರೈನ್ ಕಲ್ಚರಲ್ ಹಾಲ್‌ನಲ್ಲಿ ಅದ್ದೂರಿಯಾಗಿ ನಡೆಯಿತು. 

ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಸಂಗೀತ ಮತ್ತು ನೃತ್ಯದ ವೈಭವವನ್ನು ಪ್ರತಿಬಿಂಬಿಸಿದ ಈ ಸಾಂಸ್ಕೃತಿಕ ಮಹೋತ್ಸವವು ಬಹರೈನ್‌ನ ಕನ್ನಡಿಗರು ಮತ್ತು ವಿವಿಧ ಸಮುದಾಯದ ಸಂಸ್ಕೃತಿ ಪ್ರೇಮಿಗಳಿಂದ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಸುಮಾರು 600ಕ್ಕೂ ಹೆಚ್ಚು ಪ್ರೇಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




























ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರಾದ ಕೆ. ವೆಂಕಟೇಶ್ ಮತ್ತು ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕರಾದ ಅಶೋಕ ಪಟ್ಟಣ ಜಂಟಿಯಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಮತ್ತು ಕನ್ನಡ ಚಿತ್ರರಂಗದ ಖ್ಯಾತ ನಟ ವಿನೋದ್ ಪ್ರಭಾಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇಬ್ಬರೂ ತಮ್ಮ ಭಾಷಣದಲ್ಲಿ ವಿದೇಶದಲ್ಲಿರುವ ಕನ್ನಡಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.

ಸಂಘದ ಅಧ್ಯಕ್ಷ ಅಜಿತ್ ಬಂಗೇರ ಪ್ರಾಸ್ತಾವಿಕ ಮಾತು ನುಡಿದರು. ಉಪಾಧ್ಯಕ್ಷ ನಿತಿನ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ‌‌‌ ರಾಮಪ್ರಸಾದ್ ಅಮ್ಮೆನಡ್ಕ  ಸಭಾಕಾರ್ಯಕ್ರಮವನ್ನು ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಸಂಘದ ವಾರ್ಷಿಕ ಸ್ಮರಣ ಸಂಚಿಕೆ ‘ಕಾವೇರಿ’ಯನ್ನು ಸುರೇಶ್ ಶೆಟ್ಟಿ ಗುರ್ಮೆ, ವಿನೋದ್ ಪ್ರಭಾಕರ್ ಅವರೊಂದಿಗೆ ಸಂಘದ ಪದಾಧಿಕಾರಿಗಳು ಮತ್ತು ಕಾವೇರಿ ಸಂಪಾದಕೀಯ ಮಂಡಳಿ ಸದಸ್ಯರ ಉಪಸ್ಥಿತಿಯೊಂದಿಗೆ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ, ಗಣ್ಯರಾದ ಮೊಯಿದಿನ್ ಬಾವಾ (ಮಾಜಿ ಶಾಸಕರು, ಮಂಗಳೂರು ಉತ್ತರ), ಮುನಿಯಾಲು ಉದಯ ಕುಮಾರ್ ಶೆಟ್ಟಿ (ಉದ್ಯಮಿ ಮತ್ತು ಸಮಾಜಸೇವಕರು), ಪ್ರತಿಭಾ ಕುಳಾಯಿ (ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ), ಮಟ್ಟಾರು ರತ್ನಾಕರ ಹೆಗ್ಡೆ (ಮಾಜಿ ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ), ಸತ್ಯೇಂದ್ರ ಪೈ, ಹಿರಿಯಣ್ಣ ನಾರಾಯಣ ಸ್ವಾಮಿ, ಡಾ.ಎಂ.ಅಣ್ಣಯ್ಯ ಕುಲಾಲ್, ಇಬ್ರಾಹಿಂ ಗಡಿಯಾರ್, ಸತೀಶ್ ಪೂಜಾರಿ, ದೀಪಕ್ ಪೂಜಾರಿ, ಸುಜಿತ್ ಅಂಚನ್, ಜಯಶಂಕರ್ ವಿಶ್ವನಾಥನ್, ಸುಭಾಶ್ಚಂದ್ರ, ಅರುಣ್ ಕುಮಾರ್  ಮೊದಲಾದವರಿಗೆ ಗೌರವ ಸಮರ್ಪಿಸಲಾಯಿತು. ಬಹರೈನ್‌ನಲ್ಲಿ ಐವತ್ತು ವರ್ಷ ಪೂರೈಸಿ, ಸಮಾಜಸೇವೆ ಮಾಡುತ್ತಿರುವ ಹಾಜಿ ಅಬ್ದುಲ್ ರಝಾಕ್ ಹೆಜಮಾಡಿ (Metalco Group)ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.

ಅತಿಥಿಗಳು ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡು ಕನ್ನಡ ಸಂಘದ ಸೇವೆಯನ್ನು ಶ್ಲಾಘಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಗುರು ಡಾ.ಸಹನಾ ಭಟ್ ಅವರ  ನಿರ್ದೇಶನದಲ್ಲಿ ರೂಪುಗೊಂಡ ನೃತ್ಯರೂಪಕ ಹಾಗೂ ಅವರ "ಅಭಿಮನ್ಯು" ವಿಶಿಷ್ಟ ನೃತ್ಯ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಯಿತು. ಅವರ ನಿರ್ದೇಶನದಲ್ಲಿ ಪ್ರದರ್ಶಿಸಲಾದ ‘ಕರ್ನಾಟಕ ದರ್ಶನ’ ನೃತ್ಯ ರೂಪಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಇದರಲ್ಲಿ ಕನ್ನಡ ಸಂಘದ 60ಕ್ಕೂ ಹೆಚ್ಚು ಸದಸ್ಯರು ಮತ್ತು ಮಕ್ಕಳು ಭಾಗವಹಿಸಿ ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಮನಮೋಹಕವಾಗಿ ಪ್ರದರ್ಶಿಸಿದರು. 

ಖ್ಯಾತ ಗಾಯಕಿಯರಾದ ಕಲಾವತಿ ದಯಾನಂದ್ ಮತ್ತು ಹೊಂಬೇಗೌಡ ಅವರ ಹಾಡು ಪ್ರೇಕ್ಷಕರಿಗೆ ಸಂಗೀತ ಸವಿಯನ್ನಿತ್ತಿತು. ಸ್ಟ್ಯಾಂಡ್ ಅಪ್ ಕಾಮಿಡಿಯನ್ ರಾಘವೇಂದ್ರ ಆಚಾರ್ಯ ತಮ್ಮ ಹಾಸ್ಯದ‌ ಮಾತುಗಳಿಂದ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ನಿರೂಪಕಿ ಮತ್ತು ಕಲಾವಿದೆ ಸವಿ ಪ್ರಕಾಶ್ ಮತ್ತು ಸಹನಿರೂಪಕ ಕಮಲಾಕ್ಷ ಅಮೀನ್ ಕಾರ್ಯಕ್ರಮಕ್ಕೆ ಇನ್ನಷ್ಟು ಚೈತನ್ಯ ನೀಡಿದರು.

“ಕನ್ನಡ ವೈಭವ 2025” ಬಹರೈನ್‌ನ ಕನ್ನಡಿಗರ ಏಕತೆ, ಭಾಷಾ ಪ್ರೀತಿ ಮತ್ತು ಸಾಂಸ್ಕೃತಿಕ ಬದ್ಧತೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸಿದ ಸ್ಮರಣೀಯ ಕಾರ್ಯಕ್ರಮವಾಯಿತು. ಸಾಂಸ್ಕೃತಿಕ ಕಾರ್ಯದರ್ಶಿ ಹರಿಣಿ ಉತ್ಕರ್ಷ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

ವರದಿ: ಕಮಲಾಕ್ಷ ಅಮೀನ್

Ads on article

Advertise in articles 1

advertising articles 2

Advertise under the article