ಡಿ.26ರಿಂದ 28ರವರೆಗೆ ಕಾಪು ಲೈಟ್ ಹೌಸ್ ಕಡಲ ತೀರದಲ್ಲಿ "ಕಡಲ ಪರ್ಬ"

ಡಿ.26ರಿಂದ 28ರವರೆಗೆ ಕಾಪು ಲೈಟ್ ಹೌಸ್ ಕಡಲ ತೀರದಲ್ಲಿ "ಕಡಲ ಪರ್ಬ"

ಉಡುಪಿ: ಮಾಜಿ ಪ್ರಧಾನಿ ದಿ. ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿ ಪ್ರಯುಕ್ತ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಕಾಪು ಮಂಡಲ ಬಿಜೆಪಿ ವತಿಯಿಂದ ಇದೇ ಡಿ. 26, 27 ಮತ್ತು 28ರಂದು ಕಾಪು ಲೈಟ್ ಹೌಸ್ ಕಡಲ ತೀರದಲ್ಲಿ "ಕಾಪು ಕಡಲ ಪರ್ಬ"ವನ್ನು ಆಯೋಜಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, ಈ ಕಡಲ ಪರ್ಬದಲ್ಲಿ ಬೀಚ್ ಉತ್ಸವ, ಆಹಾರ ಮೇಳ, ಕ್ರೀಡೋತ್ಸವ, ಸಾಂಸ್ಕೃತಿಕ ಉತ್ಸವಗಳು ನಡೆಯಲಿವೆ. ಕಡಲ ಪರ್ಬವನ್ನು ಡಿ.26ರಂದು ಸಂಜೆ 7ಗಂಟೆಗೆ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ ಉದ್ಘಾಟಿಸಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ಕಾಪು ಬೀಚ್ ಬಳಿಯ ಕೋಟ್ಯಾನ್‌ಕಾರ್ ಮೂಲಸ್ಥಾನದಲ್ಲಿ ‘ನಾ ಕಂಡಂತೆ ಅಟಲ್’ ವಿಷಯದಲ್ಲಿ ಪ್ರಬಂಧ ಸ್ಪರ್ಧೆ, 4 ಗಂಟೆಗೆ ಆತ್ಮ ನಿರ್ಭರ ಭಾರತ ವಿಷಯದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ, 6 ಗಂಟೆಗೆ ಪುತ್ತೂರು ಜಗದೀಶ ಆಚಾರ್ಯರಿಂದ ಸಂಗೀತ ಸಂಜೆ ನಡೆಯಲಿದೆ. ಬಳಿಕ ಆಹಾರ ಮೇಳ ಉದ್ಘಾಟನೆಗೊಳ್ಳಲಿದೆ. ಆ ನಂತರ ಶೋಬಾಜಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಡಿ. 27ರಂದು ಬೆಳಿಗ್ಗೆ 9.30ರಿಂದ ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆ ಹಾಗೂ ದಂತ ಚಿಕಿತ್ಸಾ ಶಿಬಿರ, ಮಧ್ಯಾಹ್ನ 2:30ಕ್ಕೆ ಪುರುಷರು ಹಾಗೂ ಮಹಿಳೆಯರಿಗೆ ಬೀಚ್ ಹಗ್ಗಜಗ್ಗಾಟ, ಬೀಚ್‌ನಲ್ಲಿ ಮರಳು ಶಿಲ್ಪ ರಚನೆ ಸ್ಪರ್ಧೆ ನಡೆಯಲಿವೆ. ಸಂಜೆ 7 ಗಂಟೆಗೆ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಹಿತ ಪ್ರಮುಖರು ಭಾಗವಹಿಸುವರು. ರಾತ್ರಿ 8 ಗಂಟೆಗೆ ರಘು ದೀಕ್ಷಿತ್‌ರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

ಡಿ. 28ರಂದು ಬೆಳಿಗ್ಗೆ 9:30ರಿಂದ ಬೃಹತ್ ಆರೋಗ್ಯ ಶಿಬಿರ, 11:30ಕ್ಕೆ ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾಟ ಜರಗಲಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಸಹಿತ ಪ್ರಮುಖರು ಭಾಗವಹಿಸುವರು. ರಾತ್ರಿ 8 ಗಂಟೆಗೆ ಕುನಾಲ್ ಗಾಂಜಾವಾಲಾ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು‌ ತಿಳಿಸಿದರು.

ಕಾರ್ಯಕ್ರಮದ ಸಂದರ್ಭದಲ್ಲಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ಡಾ. ವಿದ್ಯಾಧರ್, ಡಾ. ದೇವದಾಸ್ ಕಾಮತ್ ಹಿರಿಯಡ್ಕ ಸಹಿತ ಐದು ಮಂದಿ ಸಾಧಕರಿಗೆ ಅಟಲ್ ಸಾಧನಾ ಪ್ರಶಸ್ತಿ, ವಿವಿಧ ಕ್ಷೇತ್ರದ ಸಾಧಕರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಲಾಲಾಜಿ ಮೆಂಡನ್, ಪಕ್ಷದ ಪ್ರಮುಖರಾದ ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ಶ್ರೀಕಾಂತ ನಾಯಕ್, ವೀಣಾ ಶೆಟ್ಟಿ, ಜಿತೇಂದ್ರ ಶೆೆಟ್ಟಿ ಮುಂತಾದವರಿದ್ದರು.

Ads on article

Advertise in articles 1

advertising articles 2

Advertise under the article