ಡಿ.28ರಿಂದ 31ರ ವರಗೆ ಉಡುಪಿ ಜಿಲ್ಲೆಯಲ್ಲಿ ಸಂಚರಿಸಲಿದೆ 'ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ" ಸ್ತಬ್ಧಚಿತ್ರ ರಥಯಾತ್ರೆ: ಡಾ.ಪಿ.ವಿ.ಭಂಡಾರಿ
ಉಡುಪಿ: ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಸಮಿತಿಯು ರಾಜ್ಯಾದ್ಯಂತ 'ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ' ಸ್ತಬ್ಧಚಿತ್ರ ರಥಯಾತ್ರೆಯನ್ನು ಕೈಗೊಂಡಿದ್ದು, ಈ ರಥಯಾತ್ರೆಯು ಡಿ.28, 29, 30 ಮತ್ತು 31 ರಂದು ಉಡುಪಿ ಜಿಲ್ಲೆಯಲ್ಲಿ ಸಂಚರಿಸಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಿದೆ ಎಂದು ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಸಮುದಾಯದ ಭವಿಷ್ಯ, ಆರೋಗ್ಯ ಮತ್ತು ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ ಹಾಗೂ ವಿನಾಶಕಾರಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಶಾಲೆ ಕಾಲೇಜು ಆವರಣ ಮತ್ತು ಬಸ್ ನಿಲ್ದಾಣಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ನಾಗರಿಕರು ವಿದ್ಯಾರ್ಥಿಗಳು ಮತ್ತು ಪ್ರಜ್ಞಾವಂತ ಸಾರ್ವಜನಿಕರು ಸಹಕಾರ ನೀಡಬೇಕು. ಪೊಲೀಸ್ ಇಲಾಖೆ ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಜೊತೆಗೆ ನಾವು ಕೂಡ ಜಾಗೃತಿ ಮೂಡಿಸಿದರೆ ಆದಷ್ಟು ಯುವ ಜನರನ್ನು ಡ್ರಗ್ಸ್ ನಿಂದ ದೂರ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಅಜಯ್ ಪಿ. ಶೆಟ್ಟಿ ಡಾ.ವಿಜಯೇಂದ್ರ ರಾವ್,ಬಾಲಕೃಷ್ಣ ಎಸ್ ಮದ್ದೋಡಿ ಸತೀಶ್ ಸಾಲಿಯಾನ್ ಮತ್ತು ರವಿರಾಜ್ ಸುವರ್ಣ ಉಪಸ್ಥಿತರಿದ್ದರು.