ಉಡುಪಿ: 15 ದಿನಗಳೊಳಗೆ ಸೂಲಡ್ಪು- ಮಡಿವಾಳಸಾಲು ಹೊಳೆಯ ಹೂಳೆತ್ತದಿದ್ದರೆ ಬೃಹತ್ ಪ್ರತಿಭಟನೆ: ಕೋಟದ 'ರೈತಧ್ವನಿ' ಎಚ್ಚರಿಕೆ
ಉಡುಪಿ: ಬ್ರಹ್ಮಾವರ ತಾಲೂಕಿನ ಏಳು ಗ್ರಾಮಗಳಲ್ಲಿ ಹಾದು ಹೋಗುವ ಸೂಲಡ್ಪು- ಮಡಿವಾಳಸಾಲು ಹೊಳೆಯ ಹೂಳೆತ್ತುವ ಕಾರ್ಯವನ್ನು 15 ದಿನಗಳೊಳಗೆ ಕೈಗೆತ್ತಿಕೊಳ್ಳಬೇಕು. ಇಲ್ಲದಿದ್ದರೆ ಬ್ರಹ್ಮಾವರ ತಾಲೂಕು ಕಚೇರಿಯ ಎದುರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಕೋಟದ ರೈತರ ಸಂಘಟನೆ ರೈತಧ್ವನಿಯ ಅಧ್ಯಕ್ಷ ಮಣೂರು ಜಯರಾಮ ಶೆಟ್ಟಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆಯ ಪದಾಧಿಕಾರಿಗಳು ಈ ಕುರಿತು ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು,15 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. 15 ದಿನಗಳಲ್ಲಿ ಹೂಳೆತ್ತುವ ಪ್ರಕ್ರಿಯೆಗೆ ಸಕಾರಾತ್ಮಕ ಸ್ಪಂದನೆ ಸಿಗದಿದ್ದರೆ ಸರಕಾರ ಹಾಗೂ ಅಧಿಕಾರಿಗಳ ಗಮನ ಸೆಳೆಯಲು ಪ್ರಥಮ ಹಂತದ ಹೋರಾಟವಾಗಿ ಬ್ರಹ್ಮಾವರದ ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ವಕೀಲ, ಸಂಘಟನೆಯ ಮಂಜುನಾಥ ಗಿಳಿಯಾರು ಮಾತನಾಡಿ, ಬ್ರಹ್ಮಾವರ ತಾಲೂಕಿನ ಮಣೂರು, ಕೊಕೂರು,ಗಿಳಿಯಾರು, ಚಿತ್ರಪಾಡಿ, ಕಾರ್ಕಡ ಹಾಗೂ ಕಾವಡಿ ಗ್ರಾಮದಲ್ಲಿ ಸೂಲಡ್ಪು-ಮಡಿವಾಳಸಾಲು ಹೊಳೆ ಹಾದು ಹೋಗುತಿದ್ದು, ಇಲ್ಲೆಲ್ಲಾಹೊಳೆಯಲ್ಲಿ ಹೂಳು ತುಂಬಿದೆ. ಕೊಕೂರು, ಗಿಳಿಯಾರು, ಚಿತ್ರಪಾಡಿ ಹಾಗೂ ಚಿತ್ರಪಾಡಿ ಗ್ರಾಮದ ಬೈಕೂರುಬೈಲಿನಲ್ಲಿ ಅತಿ ಕಿರಿದಾದ ತೂಬು ಸೇತುವೆಗಳಿರುವುದರಿಂದ ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿಯಾಗಿ, ಈ ಹೊಳೆ ಪಾತ್ರದ ನೂರಾರು ಎಕರೆ ಪ್ರದೇಶದ ಕೃಷಿ ನಾಶವಾಗುತ್ತಿದೆ ಎಂದರು.
ಈ ಬಗ್ಗೆ ಸರಕಾರವನ್ನು ಎಚ್ಚರಿಸಲು ಧರಣಿಯನ್ನು ನಡೆಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಸಂಘಟನೆಯ ನಿಯೋಗವೊಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಅವರಿಗೆ ಮನವಿಯನ್ನು ನೀಡಿತ್ತು. ನಮ್ಮ ಮನವಿಗೆ ಸ್ಪಂದಿಸಿದ ಡಿಸಿಎಂ, 4.5 ಕೋಟಿ ರೂ.ಗಳನ್ನು ವಾರಾಹಿ ನಿಗಮದಿಂದ ಬಿಡುಗಡೆಗೊಳಿಸಿ, ಹೊಳೆಯ ಹೂಳೆತ್ತುವ ಕಾಮಗಾರಿ ನಡೆಸುವಂತೆ ಟಿಪ್ಪಣಿ ಬರೆದಿದ್ದರು. ಇದರಂತೆ ನಿಗಮದ ಅಭಿಯಂತರರು 4.5 ಕೋಟಿ ರೂ.ಗೆ ಅಂದಾಜುಪಟ್ಟಿ ತಯಾರಿಸಿ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್‌ಗೆ ಕಳುಹಿಸಿದ್ದರು. ಇದಾಗಿ ವರ್ಷ ಕಳೆದರೂ ಮುಂದಿನ ಯಾವುದೇ ಪ್ರಕ್ರಿಯೆ ಇದುವರೆಗೆ ನಡೆದಿಲ್ಲ ಎಂದವರು ದೂರಿದರು.
ಇನ್ನು 15 ದಿನಗಳಲ್ಲಿ ಹೊಳೆಯ ಹೂಳೆತ್ತಲು ಟೆಂಡರ್ ಪ್ರಕ್ರಿಯೆ ನಡೆದು ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣದಿದ್ದರೆ ನಾವು ಗ್ರಾಮಸ್ಥರು ಹಾಗೂ ವಿವಿಧ ರೈತ ಸಂಘಟನೆಗಳೊಂದಿಗೆ ಸೇರಿ ಪ್ರತಿಭಟನೆ ನಡೆಸುತ್ತೇವೆ. ಈ ಹೋರಾಟವೂ ನಿರೀಕ್ಷಿತ ಫಲ ನೀಡದಿದ್ದರೆ ಉಗ್ರಸ್ವರೂಪದ ಹೋರಾಟಕ್ಕಿಳಿದು ರಸ್ತೆ ತಡೆ, ಸಚಿವರು, ಜನಪ್ರತಿನಿಧಿಗಳಿಗೆ ಕಪ್ಪು ಬಾವುಟ ಪ್ರದರ್ಶನದಂಥ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಮೇಶ್ ಮೆಂಡನ್, ತಿಮ್ಮ ಕಾಂಚನ್, ಸುಧಾಕರ ಶೆಟ್ಟಿ ಗಿಳಿಯಾರು, ಮಹಾಬಲ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.