ಬ್ರಹ್ಮಾವರ; ಮಹಿಳಾ ದೌರ್ಜನ್ಯದ ವಿರುದ್ಧ ತಕ್ಷಣ ಕ್ರಮಕ್ಕೆ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಒತ್ತಾಯ
ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಹಿಳಾ ದೌರ್ಜನ್ಯದ ವಿರುದ್ಧ ತಕ್ಷಣ ಕ್ರಮ ಜರಗಿಸುವಂತೆ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪೂರು ಉಗ್ಗೇಲ್ ಬೆಟ್ಟು ನಿವಾಸಿ ಅಕ್ಷತಾ ಪೂಜಾರಿ ಅವರ ಮನೆಗೆ ಮುಂಜಾನೆ ಸುಮಾರು 4.00 ಗಂಟೆಗೆ 5 ಮಂದಿ ಆಕ್ರಮವಾಗಿ ಪ್ರವೇಶಿಸಿ ತಾವು ಪೊಲೀಸ್ ಎಂದು ಹೇಳಿಕೊಂಡು ದಾಂದಲೆ ನಡೆಸಿ, ಕುಮಾರಿ ಅಕ್ಷತಾ ಅವರ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಕೃತ್ಯವನ್ನು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ.
ಈ ಕುರಿತು ಅಕ್ಷತಾ ಪೂಜಾರಿ ಅವರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದಾಗ ಅವರಿಗೆ ನ್ಯಾಯ ದೊರಕಿಸುವ ಬದಲು ಅವರ ಮೇಲೆಯೇ ಎಫ್.ಐ.ಆರ್. ದಾಖಲಿಸಿರುವುದು ಅತ್ಯಂತ ವಿಚಿತ್ರ ನಡೆಯಾಗಿದೆ. ಹಲ್ಲೆಗೊಳಗಾಗಿರುವ ಅಕ್ಷತಾ ಪೂಜಾರಿ ಅವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು, ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.
ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಈ ಕೆಳಗಿನ ಬೇಡಿಕೆಗಳನ್ನು ಮಂಡಿಸಲಾಗಿದೆ...
* ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಮಹಿಳೆಯರಿದ್ದ ಮನೆಗೆ ಬೆಳಿಗ್ಗೆ 4.30ರ ಸುಮಾರಿಗೆ ಆಕ್ರಮವಾಗಿ ನುಗ್ಗಿ ಯುವತಿಗೆ ಹಲ್ಲೆ ನಡೆಸಿರುವ ಪೊಲೀಸ್ ಸಿಬ್ಬಂದಿಗಳನ್ನು ತಕ್ಷಣ ಸೇವೆಯಿಂದ ಅಮಾನತು ಮಾಡಬೇಕು.
* ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿರುವ ಆರೋಪಿಯ ಚಿಕ್ಕಮ್ಮನ ಮನೆಗೆ ಸುಳ್ಳು ಹೇಳಿಕೊಂಡು ಮಹಿಳಾ ಪೋಲಿಸರು ಇಲ್ಲದೇ ಕೇವಲ ಪುರುಷ ಪೋಲಿಸರು ನುಗ್ಗಿ ಅಕ್ಷತಾ ಪೂಜಾರಿಗೆ ಹಲ್ಲೆ ನಡೆಸಿದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರನ್ನು ಪರಿಗಣಿಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ತಕ್ಷಣ ಎಫ್.ಐ.ಆರ್. ದಾಖಲಿಸಿ ಕಾನೂನಾತ್ಮಕ ಕ್ರಮ ಜರಗಿಸಬೇಕು.
* ಸಂತ್ರಸ್ತರು ನೀಡಿದ ದೂರನ್ನು ದಾಖಲಿಸದೆ ಪೊಲೀಸರನ್ನು ರಕ್ಷಿಸುವ ಸಲುವಾಗಿ ಅಕ್ಷತಾ ಪೂಜಾರಿ ಮತ್ತು ಆಕೆಯ ತಾಯಿಯ ಮೇಲೆ ಕರ್ತವ್ಯಕ್ಕೆ ಅಡ್ಡಿ ಎಂಬ ಸುಳ್ಳು ಕೇಸು ದಾಖಲಿಸಿರುವ ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿಗಳ ವಿರುದ್ಧ ಅಗತ್ಯ ಶಿಸ್ತು ಕ್ರಮ ಜರಗಿಸಬೇಕು ಹಾಗೂ ಸಂತ್ರಸ್ತರ ವಿರುದ್ಧ ದಾಖಲಾದ ಸುಳ್ಳು ಎಫ್.ಐ.ಆರ್. ಅನ್ನು ಪರಿಶೀಲಿಸಿ ರದ್ದುಗೊಳಿಸಬೇಕು.
ಬುದ್ದಿವಂತರ ಜಿಲ್ಲೆ ಎಂದು ಖ್ಯಾತಿ ಪಡೆದಿರುವ ಉಡುಪಿ ಜಿಲ್ಲೆಯಲ್ಲಿ ರಕ್ಷಕರೇ ಭಕ್ಷಕರಾಗಿ ವರ್ತಿಸಿದ ಈ ಘಟನೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಈ ಪ್ರಕರಣದಿಂದ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ನ್ಯಾಯಕ್ಕಾಗಿ ಮಹಿಳೆಯರು ಯಾರನ್ನು ಮೊರೆ ಹೋಗಬೇಕು ಎಂಬ ಸಂದಿಗ್ದ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸದ್ರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಪೊಲೀಸರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಿ, ಅವರ ವಿರುದ್ಧ ಕೇಸು ದಾಖಲಿಸಿ ನೊಂದ ಯುವತಿಗೆ ನ್ಯಾಯ ದೊರಕಿಸಿಕೊಡುವ ಮೂಲಕ ಜಿಲ್ಲೆಯ ಸಮಸ್ತ ಮಹಿಳೆಯರ ಸಹಿತ ನಾಗರಿಕ ಸಮಾಜಕ್ಕೆ ಪೋಲಿಸ್ ಇಲಾಖೆಯ ಮೇಲೆ ವಿಶ್ವಾಸ, ಗೌರವ ಉಳಿಯುವಂತೆ ಶೀಘ್ರ ದಿಟ್ಟ ಕ್ರಮ ಜರಗಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂದ್ಯಾ ರಮೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಸುಮಾ ಶೆಟ್ಟಿ, ಸುಜಲಾ ಸುವರ್ಣ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಶ್ಯಾಮ್ ಸುಂದರ್, ಕಾಪು ಮಂಡಲ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಉಡುಪಿ ನಗರ ಅಧ್ಯಕ್ಷೆ ನೀತಾ ಪ್ರಭು, ಉಡುಪಿ ಗ್ರಾಮಾಂತರ ಅಧ್ಯಕ್ಷೆ ರಮ್ಯಾ ರಾವ್, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಸುಮನಾ ಪೂಜಾರಿ, ಕವಿತಾ ನವೀನ್ ಉಪಸ್ಥಿತರಿದ್ದರು.