ಡಿ.14ರಂದು ದುಬೈಯಲ್ಲಿ 'ಯುಎಇ ಬಂಟ್ಸ್'ನ 48ನೇ ವರ್ಷದ 'ಭಾವೈಕ್ಯ' ಬಂಟರ ಮಹಾಸಮಾಗಮ; ಸಮಾರಂಭಕ್ಕೆ ಮೆರುಗು ನೀಡಲಿದ್ದಾರೆ ರಿಷಭ್ ಶೆಟ್ಟಿ, ವಿವೇಕ್ ಒಬೆರಾಯ್, ಬ್ರಿಜೇಶ್ ಚೌಟ
ದುಬೈ: ಯುಎಇ ಬಂಟ್ಸ್ ನ 48ನೇ ವರ್ಷದ 'ಭಾವೈಕ್ಯ' ಬಂಟರ ಮಹಾಸಮಾಗಮವು ಡಿಸೆಂಬರ್ 14ರಂದು ನಗರದ ಶೇಖ್ ಝಾಯೀದ್ ರಸ್ತೆಯ ಮಿಲೆನಿಯಂ ಪ್ಲಾಝ ಹೋಟೆಲ್ ಡೌನ್ ಟೌನ್ (ಹಳೆಯ ಕ್ರೌನ್ ಪ್ಲಾಝ) ನಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಯುಎಇ ಬಂಟರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 'ಬಂಟ ವಿಭೂಷಣ ಪ್ರಶಸ್ತಿ' ಪ್ರದಾನ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ಯುಎಇ ಬಂಟ್ಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ: ಯುಎಇ ಬಂಟ ಬಾಂಧವರಿಂದ ತುಳುನಾಡ ಮಣ್ಣ್ ದ ಮಹಿಮೆ, ಭಾರತದ ಸಂಸ್ಕೃತಿಯ ಪಯಣ, ಬಂಟೆರ್ನ ಐಸಿರ, ಕಿರುಚಿತ್ರ ಸ್ಪರ್ಧೆ ಸೇರಿದಂತೆ ಇತರ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.
'ಬಂಟ ವಿಭೂಷಣ ಪ್ರಶಸ್ತಿ' ಪ್ರದಾನ: ವರ್ಷಂಪ್ರತಿ ಕೊಡಮಾಡುವ ಯುಎಇ ಬಂಟರ ಪ್ರತಿಷ್ಠಿತ 'ಬಂಟ ವಿಭೂಷಣ ಪ್ರಶಸ್ತಿ'ಯನ್ನು ಮಂಗಳೂರು ಕಂಬಳದ ರೂವಾರಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಚಿತ್ರರಂಗದ ನಟ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ, ಬಾಲಿವುಡ್ ನಟ ವಿವೇಕ್ ಒಬೆರಾಯ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಚಿತ್ರನಟ ಸಾಯಿಲ್ ರೈ ಮತ್ತು ನಯನ ಶೆಟ್ಟಿಯವರು ಮಾಡಲಿದ್ದಾರೆ.
ಯುಎಇಯಲ್ಲಿ ಇರುವ ಎಲ್ಲಾ ಬಂಟ ಬಾಂಧವರು 48ನೇ ವರ್ಷದ ಬಂಟರ ಮಹಾಸಮಾಗಮದಲ್ಲಿ ಭಾಗವಹಿಸಬೇಕೆಂದು ಹಾಗೂ ಬೆಳಗ್ಗೆ 10 ಗಂಟೆಯ ಒಳಗೆ ಆಗಮಿಸಿದವರಿಗೆ ಉಚಿತ ಪ್ರವೇಶ ಮತ್ತು 8 ಗ್ರಾಂ ಚಿನ್ನದ ನಾಣ್ಯ ಗೆಲ್ಲುವ ಅವಕಾಶ ಇದೆ ಎಂದು ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಯುಎಇ ಬಂಟ್ಸ್ ನ ಪೋಷಕರಾದ ಸರ್ವೋತ್ತಮ ಶೆಟ್ಟಿ, ಉಪಾಧ್ಯಕ್ಷರಾದ ಪ್ರೇಮ್ ನಾಥ್ ಶೆಟ್ಟಿ, ಪ್ರದಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಮತ್ತು 2025ನೇ ಸಾಲಿನ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.