ಖತರ್‌ ಕರ್ನಾಟಕ ಸಂಘದಿಂದ ವಿಜಯ ಪ್ರಕಾಶ್‌ರಿಗೆ ‘ಸಂಗೀತ ಸೌರಭ’ ಬಿರುದು; ವಿಜಯ ಪ್ರಕಾಶ್ ಹಾಡಿಗೆ ಕುಣಿದು ಕುಪ್ಪಳಿಸಿದ ಜನ

ಖತರ್‌ ಕರ್ನಾಟಕ ಸಂಘದಿಂದ ವಿಜಯ ಪ್ರಕಾಶ್‌ರಿಗೆ ‘ಸಂಗೀತ ಸೌರಭ’ ಬಿರುದು; ವಿಜಯ ಪ್ರಕಾಶ್ ಹಾಡಿಗೆ ಕುಣಿದು ಕುಪ್ಪಳಿಸಿದ ಜನ

ಖತರ್‌: ಅದೊಂದು ಸುಂದರ ಸಂಜೆ. ಖತರ್‌ ಕನ್ನಡಿಗರು ಕಳೆದ ಹಲವಾರು ತಿಂಗಳುಗಳಿಂದ ಹಂಬಲಿಸಿ ನಿರೀಕ್ಷೆ ಹೊತ್ತು ಕಾಯುತ್ತಿದ್ದರು. ಕರ್ನಾಟಕ ರಾಜ್ಯೋತ್ಸವದ ಜೊತೆಗೆ, ಖತರ್‌ ಕರ್ನಾಟಕ ಸಂಘದ ರಜತ ಸಂಭ್ರಮದ ಸಮಾರೋಪದ ಭವ್ಯ ಸಮಾರಂಭಕ್ಕೆ ಕಳಶಪ್ರಾಯವಾಗಿ ನಾಡಿನ ಖ್ಯಾತ ಗಾಯಕ/ಗಾಯಕಿ ಹಾಗೂ ನುರಿತ ಸಂಗೀತಗಾರರೊಂದಿಗೆ ರಾಷ್ಟ್ರ ಹಾಗೂ ವಿಶ್ವದಾದ್ಯಂತ ಭಾಷೆ, ಪ್ರಾಂತ್ಯಗಳ ಎಲ್ಲೆ ಮೀರಿ ತಮ್ಮ ಕಂಠಸಿರಿಯಿಂದ, ನೂರಾರು ಹಾಡುಗಳ ಮೂಲಕ ಜನಪ್ರಿಯರಾಗಿರುವ ನಮ್ಮ ಕನ್ನಡದ ಮಣ್ಣಿನ ಹೆಮ್ಮೆಯ ಗಾಯಕ ವಿಜಯ ಪ್ರಕಾಶ್ ಸಂಗೀತ ರಸಸಂಜೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು.

ಕನ್ನಡದ ಪ್ರಕಾಶವನ್ನು ತಮ್ಮ ಹಾಡುಗಳ ಮೂಲಕ ವಿಜಯದ ಅಂಚಿಗೆ ಕೊಂಡೊಯ್ಯುವ ಅಮೃತಘಳಿಗೆಯಲ್ಲಿ ವಿಜಯ ಪ್ರಕಾಶ್ ವೇದಿಕೆಗೆ ಆಗಮಿಸಿದರು. ಅಂಬಾರಿಗಳ ಹೊತ್ತ ವೈಭವದ ಯುಗ್ಮ ಗಜಗಳ ಹೊಯ್ಸಳ ದ್ವಾರ, ಹಾದಿಯುದ್ದಕ್ಕೂ ನಾಡು -ನುಡಿಗಾಗಿ ಸೇವೆ ಸಲ್ಲಿಸಿ, ಕೀರ್ತಿ ಹರಡಿದ ಕನ್ನಡದ ಮಹಾನ್ ಚೇತನಗಳ ಭಾವಚಿತ್ರಗಳು, ಝಗಮಗಿಸುವ ವರ್ಣಾಲಂಕೃತ ವೇದಿಕೆ, ವಿಶಾಲ ಮೈದಾನದಲ್ಲಿ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಸಂಗೀತಪ್ರೇಮಿಗಳಲ್ಲಿ ವಿದ್ಯುತ್ ಸಂಚಾರವಾಯಿತು.




ಅಪ್ಪುವನ್ನು ನೆನಪಿಸಿದ ವಿಜಯ ಪ್ರಕಾಶ್ ಹಾಡು...  ನೆನೆದು ಭಾವುಕರಾದ ಕನ್ನಡಿಗರು

ಅದಾದ ನಂತರ ಒಂದು ಸಣ್ಣ ವಿರಾಮವನ್ನು ಪಡೆಯದೇ ವೇದಿಕೆಯನ್ನು ತಮ್ಮದಾಗಿಸಿಕೊಂಡ ವಿಜಯ ಪ್ರಕಾಶ್ ಹಾಡುಗಳ ಮಳೆಗರೆದರು. ಅವರ ಹಾಡುಗಳಲ್ಲಿ ಜೇನಿನ ಹೊಳೆಯಿತ್ತು, ಹಾಲಿನ ಮಳೆಯಿತ್ತು, ಕನ್ನಡ ಸುಧೆಯ ಸವಿಯಿತ್ತು. ಕರತಾಡನದ ಮಧ್ಯೆ, ಅಪ್ಪುವನ್ನು ನೆನಪಿಸುವ, ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ, ನೀನೇ ರಾಜಕುಮಾರ.... ಹಾಡಿಗೆ ಇಡೀ ಪ್ರೇಕ್ಷಕ ಸಮೂಹದ ಕಣ್ಣುಗಳಲ್ಲಿ ನೀರಾಡಿತು. ಹಾಡಿನ ಜೊತೆಗೆ ಎಲ್ಲರೂ ತಮ್ಮ ಮೊಬೈಲ್ ಟಾರ್ಚ್ ಬೆಳಗಿಸಿ ಅಮರವಾಗಿರುವ ಅಪ್ಪುವಿಗೆ ಮತ್ತೊಮ್ಮೆ ಮೂಕನಮನ ಸಲ್ಲಿಸಿದರು.

ಮೈಮರೆತು ನರ್ತಿಸಿದ ಜನ....

ತಮ್ಮ ಪತ್ನಿ ಮಹತಿ ಹಾಗೂ ಸಹ ಗಾಯಕರಾದ ಅನನ್ಯ ಪ್ರಕಾಶ್ ಮತ್ತು ನಿಶನ್ ರೈ ಅವರೊಂದಿಗೆ ಯುಗಳ ಗೀತೆಗಳನ್ನು ಹಾಡಿ ರಂಜಿಸಿದ ವಿಜಯ ಪ್ರಕಾಶ್, ಸಭಿಕರ ನಾಡಿಮಿಡಿತವನ್ನು ಅರಿತು ಕುಣಿಯುವ, ಕುಣಿಸುವ ಗೀತೆಗಳ ಗಾಯನಕ್ಕೆ ಮುಂದಾದರು. ತನ್ಮಯತೆ ಇಂದ ಹಾಡುತ್ತಿದ್ದ, ಜೋಷ್ ಬರಿಸುವ ಹಾಡುಗಳಿಗೆ, ಕೆಲವರು ಕೂತಲ್ಲಿ, ನಿಂತಲ್ಲಿ ಕುಣಿದರೆ, ನೂರಾರು ಸಂಖ್ಯೆಯ ಅಭಿಮಾನಿಗಳು ವೇದಿಕೆಯ ಮುಂಭಾಗಕ್ಕೆ ಆಗಮಿಸಿ ಮೈಮರೆತು ನರ್ತಿಸಿದರು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಬೇರೆ ಆಯಾಮವನ್ನೇ ಸೃಷ್ಟಿಸಿತು.

ವಿಜಯ ಪ್ರಕಾಶ್ ರಿಗೆ 'ಸಂಗೀತ ಸೌರಭ' ಗೌರವ

ಮೂರು ಗಂಟೆ ಅವಧಿಯ ನಿರಂತರ ಸಂಗೀತ ಸಂಜೆಯನ್ನು ಅವಿಸ್ಮರಣೀಯ ಮಾಡಿದ ವಿಜಯ ಪ್ರಕಾಶ್ ರನ್ನು ಖತರ್ ಕರ್ನಾಟಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಅತ್ಯಂತ ಗೌರವಾದರಗಳೊಂದಿಗೆ, ಆತ್ಮೀಯತೆಯಿಂದ 'ಸಂಗೀತ ಸೌರಭ' ಎಂಬ ಬಿರುದಿನೊಂದಿಗೆ ಅಭಿಮಾನಪೂರ್ವಕವಾಗಿ ಸನ್ಮಾನಿಸಿದಾಗ  ಖತರ್ ಕನ್ನಡಿಗರು ತಮ್ಮ ಕರತಾಡನ ಮತ್ತು ಮುಗಿಲುಮುಟ್ಟುವ ಹರ್ಷೋದ್ಘಾರಗಳೊಂದಿಗೆ ಅಭೂತಪೂರ್ವ ಕ್ಷಣವನ್ನಾಗಿಸಿದರು.

Ads on article

Advertise in articles 1

advertising articles 2

Advertise under the article