ಡಿ.20ರಂದು ಉಡುಪಿ ಜಿಲ್ಲಾ ಕಾಂಗ್ರೆಸ್ ನಿಂದ ವೋಟ್ ಚೋರ್ ವಿರುದ್ಧ ಮಾನವ ಸರಪಳಿ
ಉಡುಪಿ: ಕೇಂದ್ರ ಸರ್ಕಾರದ ವೋಟ್ ಚೋರಿ ಹಗರಣದ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿರುವ ಸಹಿ ಸಂಗ್ರಹ ಅಭಿಯಾನದ ಸಮಾರೋಪ ಅಂಗವಾಗಿ ಡಿ.20ರಂದು ಬೆಳಿಗ್ಗೆ 9.30ಕ್ಕೆ ಸಿಟಿ ಬಸ್ಸು ತಂಗುದಾಣದಿಂದ ಮಣಿಪಾಲದ ಸಿಂಡಿಕೇಟ್ ಸರ್ಕಲ್ ವರೆಗೆ ಮಾನವ ಸರಪಳಿ ರಚಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದರು.
ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಮತ ಕಳ್ಳತನ ನಡೆದಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಆದರೆ ಆಯೋಗ ತನಿಖೆ ನಡೆಸದೆ ಮೌನವಹಿಸಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಮಾನವ ಸರಪಳಿಯಲ್ಲಿ ಸುಮಾರು 3 ರಿಂದ 4 ಸಾವಿರ ಮಂದಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಯುಪಿಎ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಯೋಜನೆ ಹೆಸರು ಬದಲಾಯಿಸಿ ಯೋಜನೆ ಹಳ್ಳ ಹಿಡಿಸಲು ಕೇಂದ್ರ ಸರ್ಕಾರ ಹೊರಟಿದೆ. ರಾಜ್ಯಕ್ಕೆ ಚಿಕ್ಕಾಸು ಅನುದಾನ ನೀಡದೆ ಅನ್ಯಾಯ ಎಸಗುತ್ತಿದೆ ಎಂದು ದೂರಿದರು.
ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ರಾಜು ಪೂಜಾರಿ, ಜ್ಯೋತಿ ಹೆಬ್ಬಾರ್, ರಮೇಶ್ ಕಾಂಚನ್, ರಾಘವೇಂದ್ರ ಶೆಟ್ಟಿ, ವೈ . ಸುಕುಮಾರ್ , ಗೋಪಿನಾಥ್ ಭಟ್, ದಿನೇಶ್ ಹೆಗ್ಡೆ ಮುಳವಳ್ಳಿ, ಪ್ರಶಾಂತ್ ಜತ್ತನ್ನ , ಅಣ್ಣಯ್ಯ ಸೇರಿಗಾರ್, ಕಿರಣ್ ಹೆಗ್ಡೆ , ಶರ್ಪುದ್ದೀನ್ ಶೇಖ್, ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.