ಅರಣ್ಯ ಇಲಾಖೆ ಖಾಯಂ, ಹೊರಗುತ್ತಿಗೆ ಸಿಬ್ಬಂದಿಗೆ ಗುಡ್ ನ್ಯೂಸ್: 1 ಕೋಟಿ ರೂ. ಅಪಘಾತ ವಿಮೆ ಪ್ರಕಟಿಸಿದ ಸಚಿವ ಈಶ್ವರ ಖಂಡ್ರೆ

ಅರಣ್ಯ ಇಲಾಖೆ ಖಾಯಂ, ಹೊರಗುತ್ತಿಗೆ ಸಿಬ್ಬಂದಿಗೆ ಗುಡ್ ನ್ಯೂಸ್: 1 ಕೋಟಿ ರೂ. ಅಪಘಾತ ವಿಮೆ ಪ್ರಕಟಿಸಿದ ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಅರಣ್ಯ ಇಲಾಖೆಯ ಖಾಯಂ ಅಧಿಕಾರಿ, ಸಿಬ್ಬಂದಿಗೆ ಅರಣ್ಯ ಸಚಿವರು ಗುಡ್ ನ್ಯೂಸ್ ನೀಡಿದ್ದಾರೆ. ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಅಪಘಾತ (ಮರಣ) ವಿಮೆ ನೀಡುವುದಾಗಿ ಈಶ್ವರ್ ಖಂಡ್ರೆ ಪ್ರಕಟಿಸಿದ್ದಾರೆ.

ಅರಣ್ಯ ಇಲಾಖೆಯ ಖಾಯಂ ಅಧಿಕಾರಿಗಳಿಗೆ ಒಂದು ಕೋಟಿ ರೂ. ಅಪಘಾತ (ಮರಣ) ವಿಮೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ 20 ಲಕ್ಷ ರೂಪಾಯಿ ವಿಮಾ ಸೌಲಭ್ಯ ಕಲ್ಪಿಸಲು ಬ್ಯಾಂಕ್ ಆಫ್ ಬರೋಡಾದೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ಮುಂಚೂಣಿ ಸಿಬ್ಬಂದಿಗಳು ಅಪಾಯ ಎದುರಿಸಿ ಹಗಲಿರುಳು ಶ್ರಮಿಸುತ್ತಿದ್ದು, ಇಲಾಖೆ ಕೆಲವು ಶೌರ್ಯಶಾಲಿ ಹಸಿರು ಯೋಧರನ್ನು ಕಳೆದುಕೊಂಡಿದೆ. ಇವರೆಲ್ಲರಿಗೂ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸಲು ಈ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ಹೊರಗುತ್ತಿಗೆ ಸಿಬ್ಬಂದಿಗೆ 20 ಲಕ್ಷ ವಿಮೆ: ವನ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿಯ ಪಾತ್ರವೂ ಮಹತ್ವದ್ದಾಗಿದೆ. ಹೀಗಾಗಿ ಹೊರಗುತ್ತಿಗೆ ಸಿಬ್ಬಂದಿಗೂ 20 ಲಕ್ಷ ರೂಪಾಯಿ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಅರಣ್ಯ ಇಲಾಖೆಯ ಎಲ್ಲಾ ಖಾಯಂ ಉದ್ಯೋಗಿಗಳಿಗೆ, ಅವರ ವೇತನ ಮತ್ತು ಶ್ರೇಣಿಯ ಹೊರತಾಗಿ ಎಲ್ಲರಿಗೂ 1 ಕೋಟಿ ರೂ. ಗಳ ಅಪಘಾತ ಮರಣ ವಿಮೆಯನ್ನು ಬ್ಯಾಂಕ್ ನೀಡುತ್ತದೆ. ಒಂದೊಮ್ಮೆ ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ ಹೆಚ್ಚುವರಿಯಾಗಿ 25 ಲಕ್ಷ ರೂ.ಗಳನ್ನು ಬ್ಯಾಂಕ್ ಪಾವತಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.

70 ವರ್ಷದ ವರೆಗೆ ವಿಮಾ ಸೌಲಭ್ಯ: ಬ್ಯಾಂಕ್ ಆಫ್ ಬರೋಡಾದಲ್ಲಿ ಇಲಾಖೆಯ ನೌಕರರು ಪಿಂಚಣಿ ಖಾತೆಯನ್ನು ಮುಂದುವರಿಸಿದರೆ, ಈ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯ ಸೌಲಭ್ಯ 70 ವರ್ಷ ವಯಸ್ಸಿನವರೆಗೆ ಮುಂದುವರಿಯುತ್ತದೆ. ಇದಲ್ಲದೆ, ಖಾಯಂ ಉದ್ಯೋಗಿಗಳಿಗೆ ರೂ.10 ಲಕ್ಷಗಳ ಜೀವ ವಿಮಾ ರಕ್ಷಣೆಯನ್ನು ಸಹ ಬ್ಯಾಂಕ್ ಒದಗಿಸುತ್ತದೆ ಎಂದು ಹೇಳಿದ್ದಾರೆ.

ಬ್ಯಾಂಕ್ ಆಫ್ ಬರೋಡಾ ಜೊತೆ ಒಡಂಬಡಿಕೆ: ಅರಣ್ಯ ಇಲಾಖೆಯ ನೌಕರರು ಮತ್ತು ಅವರ ಕುಟುಂಬಗಳ ಹಿತದೃಷ್ಟಿಯಿಂದ ಬ್ಯಾಂಕ್‌ ಆಫ್‌ ಬರೋಡಾದೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದ್ದು, ಹಲವು ವಿಶೇಷ ಸವಲತ್ತುಗಳೂ ಲಭಿಸಲಿವೆ. ಈ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವಂತೆ ಮತ್ತು ಬ್ಯಾಂಕ್ ಆಫ್ ಬರೋಡಾದಲ್ಲಿ ಸಂಬಳ ಖಾತೆ ತೆರೆಯಲು ಸೂಚಿಸಲಾಗಿದೆ ಎಂದು ಸಚಿವ ಈಶ್ವರ್ ಬಿ ಖಂಡ್ರೆ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article