ಅದ್ದೂರಿಯಾಗಿ ನಡೆದ ಜಾಮಿಯ ಆಂಗ್ಲ ಮಾಧ್ಯಮ ಶಾಲೆ-ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ
ಸುರತ್ಕಲ್: ಜಾಮಿಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಮಂಗಳವಾರ ಎಂಜೆಎಂ ಹಾಲ್ ಚೊಕ್ಕಬೆಟ್ಟುನಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಜಾಮಿಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜನಾಬ್ ಸಂಶುದ್ದೀನ್ ಐ.ಹೆಚ್. ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಮೊಯಿದೀನ್ ಬಾವ ಆಗಮಿಸಿದ್ದರು. ಗೌರವನ್ವಿತ ಅತಿಥಿಗಳಾಗಿ ಜನಾಬ್ ಹಂಝತ್ ಅಡ್ವೋಕೇಟ್, ಜನಾಬ್ ಟಿ.ಮೊಹಮ್ಮದ್, ಜನಾಬ್ ಆಸೀಫ್, ಜನಾಬ್ ಮೊಹಮ್ಮದ್ ಶರೀಫ್, ಜನಾಬ್ ಇಬ್ರಾಹಿಂ ಗುಲಾಮ್, ಶಂಶಾದ್ ಅಬೂಬಕರ್, ಜಾಮಿಯ ಶಾಲಾ ಆಡಳಿತ ಮಂಡಳಿಯ ಸರ್ವ ಸದಸ್ಯರು, ತಣ್ಣೀರುಬಾವಿ ಮೋಹಿಯುದ್ದಿನ್ ಜುಮಾ ಮಸೀದಿಯ ಎಲ್ಲಾ ಪದಾಧಿಕಾರಿಗಳು ಮತ್ತು ಮುಖ್ಯ ಶಿಕ್ಷಕಿ ಪ್ರಮೇಶ್ವರಿ ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ದಲ್ಲಿ ಜಾಮಿಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಅಬೂಬಕರ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಈ ಸಂಸ್ಥೆ ಯ ಕಾರ್ಯದರ್ಶಿ ಜನಾಬ್ ಬಜ್ಪೆ ಮೊದೀನಬ್ಬ ಶಾಲಾ ಸಾಧನೆಗಳ ಕುರಿತು ವರದಿ ವಾಚಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿ ಮಾಜಿ ಶಾಸಕ ಮೊಯಿದೀನ್ ಬಾವ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತ ಬಾವ ಅವರು ಮಕ್ಕಳಿಗೆ ಪ್ರೇರಣಾತ್ಮಕ ಹಿತವಚನ ನೀಡಿ ಮುಂದಿನ ಬೆಳವಣಿಗೆಗೆ ಸಹಕರಿಸುವುದಾಗಿ ಹೇಳಿದರು. ಅಡ್ವೋಕೇಟ್ ಹಂಝ ಮಕ್ಕಳಿಗೆ ಪ್ರೇರಣಾತ್ಮಕ ಮಾತುಗಳನ್ನಾಡಿದರು. ಸಂಶಾದ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿದ್ದ ಗಣ್ಯರು, ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು. ಕೊನೆಯಲ್ಲಿ ಸಭಾಧ್ಯಕ್ಷರು ತನ್ನ ಅಧ್ಯಕ್ಷ ಭಾಷಣದಲ್ಲಿ ಹಿತವಚನದೊಂದಿಗೆ ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣದ ಭರವಸೆ ನೀಡಿದರು. ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮ ನೆರವೇರಿತು. ದಯಾವತಿ ಮತ್ತು ಮಾಶಿತರವರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶಿಕ್ಷಕಿ ಖುಬ್ರ ವಂದನಾರ್ಪಣೆ ಮಾಡಿದರು.