ಪುತ್ತೂರಿನ ಬಿಜೆಪಿ ಮುಖಂಡನ ಪುತ್ರನಿಂದ ಅತ್ಯಾಚಾರ, ವಂಚನೆ ಪ್ರಕರಣ; ಸಂಧಾನ ಬದಲು ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಕೆ.ಪಿ.ನಂಜುಂಡಿ

ಪುತ್ತೂರಿನ ಬಿಜೆಪಿ ಮುಖಂಡನ ಪುತ್ರನಿಂದ ಅತ್ಯಾಚಾರ, ವಂಚನೆ ಪ್ರಕರಣ; ಸಂಧಾನ ಬದಲು ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಕೆ.ಪಿ.ನಂಜುಂಡಿ

ಮಂಗಳೂರು: ಬಿಜೆಪಿ ಮುಖಂಡನ ಪುತ್ರ ಮಗು ಕರುಣಿಸಿ ವಿವಾಹವಾಗದೆ ವಂಚಿಸಿದ ಪ್ರಕರಣದಲ್ಲಿ ಇನ್ನು ಸಂಧಾನ ಬದಲು ಕಾನೂನು ಹೋರಾಟ ನಡೆಸಲಾಗುವುದು ಎಂದು ವಿಶ್ವಕರ್ಮ ಸಮಾಜದ ಮುಂದಾಳು, ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಪಿ.ನಂಜುಂಡಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಸೋಮವಾರ ಮಗು ಸಹಿತ ಸಂತ್ರಸ್ತೆ ಜೊತೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ಜೆ. ರಾವ್‌ ಮತ್ತು ಸಂತ್ರಸ್ತೆ ಸ್ನೇಹಿತರಾಗಿದ್ದು, ಆಕೆ ಆತನಿಂದ ಗರ್ಭಧರಿಸಿ ಮಗುವಿಗೆ ಜನ್ಮ ನೀಡಿದ್ದಾಳೆ. ಡಿಎನ್‌ಎ ಪರೀಕ್ಷೆಯಲ್ಲಿ ಮಗುವಿನ ತಂದೆ ಕೃಷ್ಣನೇ ಎಂದು ದೃಢಪಟ್ಟಿದೆ. ಹೀಗಾಗಿ ಆಕೆಯನ್ನು ವಿವಾಹವಾಗುವಂತೆ ಹಲವು ಬಾರಿ ಪ್ರಯತ್ನ ನಡೆಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅಂತಿಮವಾಗಿ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಯುವತಿ ಬಡ ಕುಟುಂಬವಾಗಿದ್ದು, ಇಬ್ಬರೂ ಒಂದಾಗಿ ಸಂಸಾರ ಮುನ್ನಡೆಸುವ ಯೋಚನೆಯಲ್ಲಿ ಆತನ ಪೋಷಕರ ಜೊತೆ ಸಂಧಾನ ನಡೆಸಲಾಗಿದೆ. ಆದರೆ ಆತನ ಪೋಷಕರು ವಿವಾಹಕ್ಕೆ ಆತ ಸಮ್ಮತಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಸಂಧಾನ ಮುರಿದುಬಿದ್ದಿದ್ದು, ಕಾನೂನು ಹೋರಾಟವೇ ಅನಿವಾರ್ಯವಾಗಿದೆ. ಅದರಲ್ಲಿ ಸಂತ್ರಸ್ತೆಗೆ ನ್ಯಾಯಸಿಗುತ್ತದೆ ಎಂಬ ಭರವಸೆ ಇದೆ ಎಂದರು.

ಡಿಎನ್‌ಎ ಪರೀಕ್ಷೆಯಲ್ಲೂ ಮಗುವಿನ ತಂದೆ ಕೃಷ್ಣನೇ ಎಂದು ದೃಢಪಟ್ಟ ಬಳಿಕವೂ ಆತ ಮದುವೆಗೆ ನಿರಾಕರಿಸುತ್ತಿದ್ದಾರೆ. ದ.ಕ. ಹಿಂದುತ್ವದ ನೆಲ, ವಿಶ್ವಕರ್ಮ ಸಮಾಜವವೂ ಅದನ್ನೇ ನಂಬಿಕೊಂಡು ಬಂದಿದೆ. ಆದರೆ ಈ ಬಡ ಕುಟುಂಬ ವಂಚನೆಗೆ ಒಳಗಾಗಿದೆ. ಕೃಷ್ಣ ಮತ್ತು ಸಂತ್ರಸ್ತೆ ಇಬ್ಬರೂ ತಪ್ಪು ಮಾಡಿದ್ದರೂ ಮಗುವಾದ ಕಾರಣ ಅವರನ್ನು ಒಂದು ಮಾಡಿ ಈ ಪ್ರಕರಣವನ್ನು ಸುಖಾಂತ್ಯಗೊಳಿಸುವ ನಮ್ಮ ಪ್ರಯತ್ನ ಈಡೇರುತ್ತಿಲ್ಲ. ಕೃಷ್ಣನ ಪೋಷಕರು ಈಡೇರಿಸಲು ಸಾಧ್ಯವಾಗದ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅವುಗಳನ್ನು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಒಂದೆರಡು ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದರು.

ಸಂತ್ರಸ್ತರಾದ ಮಗುವಿನ ತಾಯಿ ಹಾಗೂ ಆಕೆಯ ತಾಯಿ, ಸಮಾಜದ ಮುಂದಾಳುಗಳಾದ ರಾಜೇಶ್‌ ಆಚಾರ್ಯ, ಲೋಕೇಶ್‌ ಆಚಾರ್ಯ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article