"ಆರೋಪಿ, ಮಾಜಿ ಶಾಸಕನನ್ನು ಗಲ್ಲಿಗೇರಿಸುವವರೆಗೆ ಕಾನೂನು ಹೋರಾಟ": ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಪ್ರತಿಜ್ಞೆ

"ಆರೋಪಿ, ಮಾಜಿ ಶಾಸಕನನ್ನು ಗಲ್ಲಿಗೇರಿಸುವವರೆಗೆ ಕಾನೂನು ಹೋರಾಟ": ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಪ್ರತಿಜ್ಞೆ

ನವದೆಹಲಿ: ಉಚ್ಚಾಟಿತ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ್ದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದ ಬಗ್ಗೆ ಸಂತ್ರಸ್ತೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

"ಆರೋಪಿ, ಬಿಜೆಪಿ ಮಾಜಿ ಶಾಸಕನನ್ನು ಗಲ್ಲಿಗೇರಿಸುವವರೆಗೆ" ಕಾನೂನು ಹೋರಾಟ ಮುಂದುವರಿಸುವುದಾಗಿ ಸಂತ್ರಸ್ತೆ ಪ್ರತಿಜ್ಞೆ ಮಾಡಿದ್ದಾರೆ.

"ಈ ನಿರ್ಧಾರದಿಂದ ನನಗೆ ತುಂಬಾ ಸಂತೋಷವಾಗಿದೆ. ಸುಪ್ರೀಂ ಕೋರ್ಟ್‌ನಿಂದ ನನಗೆ ನ್ಯಾಯ ಸಿಕ್ಕಿದೆ. ನಾನು ಮೊದಲಿನಿಂದಲೂ ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದೇನೆ" ಎಂದು ಸಂತ್ರಸ್ತೆ ಪಿಟಿಐಗೆ ತಿಳಿಸಿದ್ದಾರೆ.

"ನಾನು ಯಾವುದೇ ನ್ಯಾಯಾಲಯದ ವಿರುದ್ಧ ಯಾವುದೇ ಆರೋಪಗಳನ್ನು ಮಾಡುವುದಿಲ್ಲ. ನನಗೆ ಎಲ್ಲಾ ನ್ಯಾಯಾಲಯಗಳ ಮೇಲೆ ನಂಬಿಕೆ ಇದೆ. ಆದರೆ ಸುಪ್ರೀಂ ಕೋರ್ಟ್ ನನಗೆ ನ್ಯಾಯ ನೀಡಿದೆ" ಎಂದು ಅವರು ಹೇಳಿದ್ದಾರೆ.

ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, 2017ರ ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸೋಮವಾರ ತಡೆ ನೀಡಿದೆ. ಸುಪ್ರೀಂ ಕೋರ್ಟ್ ಸೆಂಗಾರ್‌ಗೆ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶಿಸಿದೆ.

ಕಾನೂನು ಹೋರಾಟ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ ಸಂತ್ರಸ್ತೆ, "ಅವನನ್ನು ಗಲ್ಲಿಗೇರಿಸುವವರೆಗೂ ನಾನು ವಿಶ್ರಮಿಸುವುದಿಲ್ಲ. ನಾನು ಹೋರಾಡುತ್ತಲೇ ಇರುತ್ತೇನೆ. ಆಗ ಮಾತ್ರ ನನ್ನ ಕುಟುಂಬ ಮತ್ತು ನನಗೆ ನ್ಯಾಯ ಸಿಗುತ್ತದೆ. ಇಂದಿಗೂ ನಮಗೆ ಬೆದರಿಕೆಗಳು ಬರುತ್ತಿವೆ" ಎಂದು ಹೇಳಿದ್ದಾರೆ.

ನನ್ನ ಕುಟುಂಬ ಸದಸ್ಯರು ಸಹ ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ತೀರ್ಪು ನ್ಯಾಯ ವ್ಯವಸ್ಥೆಯ ಮೇಲಿನ ತಮ್ಮ ನಂಬಿಕೆಯನ್ನು ಗಟ್ಟಿಗೊಳಿಸಿದೆ ಎಂದರು.

ಸುಪ್ರೀಂ ಕೋರ್ಟ್ ತೀರ್ಪಿಗೆ ಧನ್ಯವಾದ ಹೇಳಿದ ಸಂತ್ರಸ್ತೆಯ ತಾಯಿ, ತನ್ನ ಗಂಡನನ್ನು ಕೊಂದವರಿಗೆ ಮರಣದಂಡನೆ ವಿಧಿಸಬೇಕೆಂದು ವರದಿಗಾರರಿಗೆ ತಿಳಿಸಿದರು.

Ads on article

Advertise in articles 1

advertising articles 2

Advertise under the article