ಕಮಾಂಡರ್ ಚಿಟ್ಟೆಯ ಹುಳು ತನ್ನನ್ನು ಉಳಿಸಿಕೊಳ್ಳಲು ಮಾಡುವ ರಕ್ಷಣಾತ್ಮಕ ತಂತ್ರವೇನು ? ಹುಳ ಸಂಪೂರ್ಣ ಚಿಟ್ಟೆಯಾಗಿ ಹೇಗೆ ರೂಪಾಂತರಗೊಳ್ಳುತ್ತೇ ? ಇಲ್ಲಿದೆ ವಿಶೇಷ ಲೇಖನ...

ಕಮಾಂಡರ್ ಚಿಟ್ಟೆಯ ಹುಳು ತನ್ನನ್ನು ಉಳಿಸಿಕೊಳ್ಳಲು ಮಾಡುವ ರಕ್ಷಣಾತ್ಮಕ ತಂತ್ರವೇನು ? ಹುಳ ಸಂಪೂರ್ಣ ಚಿಟ್ಟೆಯಾಗಿ ಹೇಗೆ ರೂಪಾಂತರಗೊಳ್ಳುತ್ತೇ ? ಇಲ್ಲಿದೆ ವಿಶೇಷ ಲೇಖನ...

ನಝೀರ್ ಪೊಲ್ಯ(ವಾರ್ತಾ ಭಾರತಿ)

ಉಡುಪಿ: ಪ್ರಕೃತಿ ವಿಸ್ಮಯಗಳ ಕಣಜ. ಅದರಲ್ಲೂ ಕಮಾಂಡರ್ ಎಂಬ ಚಿಟ್ಟೆಯ ಲಾರ್ವಾ(ಹುಳು) ಶತ್ರುಗಳಿಂದ ರಕ್ಷಣೆ ಪಡೆದು ಪ್ರಕೃತಿಯಲ್ಲಿ ತನ್ನನ್ನು ಉಳಿಸಿಕೊಳ್ಳಲು ನಡೆಸುವ ಅತ್ಯುತ್ತಮ ರಕ್ಷಣಾತ್ಮಕ ತಂತ್ರಗಳು ಅದ್ಭುತವಾಗಿವೆ. ಈ ಚಿಟ್ಟೆ ತನ್ನ ವಿಶಿಷ್ಟ ಚಲನೆ, ಬಣ್ಣ ಮತ್ತು ಬದುಕುವ ತಂತ್ರಗಳಿಂದ ಪ್ರಕೃತಿಪ್ರಿಯರನ್ನು ಆಕರ್ಷಿಸುತ್ತದೆ.

ಆಕರ್ಷಕ ಬಣ್ಣ: ‘ಕಮಾಂಡರ್’ ಸಾಮಾನ್ಯವಾಗಿ ನಮ್ಮ ಪರಿಸರದಲ್ಲಿ ಕಂಡುಬರುವ ಸುಂದರ ಚಿಟ್ಟೆ. ಇದರ ವೈಜ್ಞಾನಿಕ ಹೆಸರು ಮೋದುಜ ಪ್ರೋಕ್ರಿಸ್. ಇದರ ರೆಕ್ಕೆಗಳ ಅಗಲ 60-75 ಮಿ.ಮೀ. ಮೇಲ್ಭಾಗದಲ್ಲಿ ಕೆಂಪು-ಕಂದು ಬಣ್ಣ, ಮುಂದಿನ ರೆಕ್ಕೆಯ ಕೋಶದಿಂದ ಹಿಂಬದಿಯ ರೆಕ್ಕೆಯ ಮಧ್ಯಭಾಗದವರೆಗೆ ಸ್ಪಷ್ಟವಾದ ಬಿಳಿ ಪಟ್ಟೆ ಕಂಡುಬರುತ್ತದೆ. ರೆಕ್ಕೆಯ ಮೇಲ್ಭಾಗದಲ್ಲಿ ದೊಡ್ಡ ಬಿಳಿ ಕಲೆ ಮತ್ತು ಕೊನೆಯಲ್ಲಿ ಬಿಳಿಯ ಚುಕ್ಕೆಗಳಿವೆ. ವರ್ಣರಂಜಿತವಾದ ಈ ಚಿಟ್ಟೆ ಸಾಕಷ್ಟು ಆಕರ್ಷಕವಾಗಿದೆ. ಗಂಡು-ಹೆಣ್ಣು ಚಿಟ್ಟೆಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.

ವೇಗ ಮತ್ತು ಚುರುಕಿನ ಹಾರಾಟ ಇದರ ವಿಶೇಷ. ವಿಶ್ರಾಂತಿಯ ಸಂದರ್ಭ ಎರಡೂ ರೆಕ್ಕೆಗಳನ್ನು ಸಮತಟ್ಟಾಗಿ ಹಿಡಿದಂತಿರುತ್ತದೆ. ಹೂವುಗಳು, ತೇವದ ಜಾಗ, ಹಳಸಿದ ಹಣ್ಣುಗಳು ಹಾಗೂ ಪ್ರಾಣಿಗಳ ಮಲದ ಮೇಲೆ ಕುಳಿತು ರಸ ಹೀರುತ್ತವೆ. ಹೂವುಗಳ ಮೇಲೆ ಅಥವಾ ಮಣ್ಣಿನಲ್ಲಿನ ಲವಣಾಂಶ ಹೀರುವ ಸಂದರ್ಭ ಇವು ರೆಕ್ಕೆಗಳನ್ನು ಹೆಚ್ಚಾಗಿ ಅಲುಗಾಡಿಸುತ್ತದೆ.

ಭಾರತದ ಬಹುತೇಕ ರಾಜ್ಯಗಳಲ್ಲಿ, ವಿಶೇಷವಾಗಿ ಪಶ್ಚಿಮಘಟ್ಟ, ಈಶಾನ್ಯ ಭಾರತ ಮತ್ತು ಶ್ರೀಲಂಕಾದಲ್ಲಿ ಹೆಚ್ಚಾಗಿ ಈ ಚಿಟ್ಟೆಗಳು ಕಂಡುಬರುತ್ತವೆ. ಅದೇ ರೀತಿ ಮನೆ ತೋಟಗಳು, ಕೃಷಿ ಪ್ರದೇಶಗಳು, ಅರಣ್ಯದ ಅಂಚುಗಳ ಬಳಿಯೂ ಕಾಣಿಸಿಕೊಳ್ಳುತ್ತವೆ.

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ಮುಸ್ಸೆಂಡಾ ಫ್ರಾಂಡೋಸಾ ಎಂಬ ಮರದ ಎಲೆಗಳಲ್ಲಿ ಇವು ಮೊಟ್ಟೆಗಳನ್ನು ಇಡುತ್ತವೆ. ಈ ಮರದ ಎಲೆಗಳೇ ಈ ಚಿಟ್ಟೆಯ ಹುಳಗಳ ಆಹಾರ. ಕನ್ನಡದಲ್ಲಿ ಬೆಳ್ಳಂಟ್ಟೆ, ಬಿಲ್ಲೋಟ್ಟಿ ಎಂಬುದಾಗಿಯೂ ಕರೆಯಲಾಗುತ್ತದೆ. ತುಳುವಿನಲ್ಲಿ ಬೊಲ್ಲೆ ತಪ್ಪು ಎಂದು ಕರೆಯುತ್ತಾರೆ. ಅದೇ ರೀತಿ ಈ ಚಿಟ್ಟೆ ಮುಸ್ಸೆಂಡಾ ಫಿಲಿಪ್ಪಿಕಾ ಸಸ್ಯದಲ್ಲೂ ಮೊಟ್ಟೆಗಳನ್ನು ಇಡುತ್ತದೆ. ಈ ಸಸ್ಯ ಬಹುತೇಕ ಮನೆ, ಗಾರ್ಡನ್‌ಗಳಲ್ಲಿ ಬೆಳೆಸಲಾಗುತ್ತದೆ.

ಲಾರ್ವದ ರಕ್ಷಣಾತ್ಮಕ ತಂತ್ರ: ಈ ಚಿಟ್ಟೆಯು ಹಸಿರು ಬಣ್ಣದ ಗೋಲಾಕಾರದ ಮೊಟ್ಟೆಯನ್ನು ತೆಳುವಾದ ಮತ್ತು ಮೃದುವಾದ ಎಲೆಯ ತುದಿಯಲ್ಲಿ ಇಡುತ್ತದೆ. ಸಾಮಾನ್ಯವಾಗಿ ನೆಲದ ಸಮೀಪ ಇರುವ ಸಣ್ಣ ಗಿಡಗಳು ಅಥವಾ ಎಲೆಗಳನ್ನೇ ಮೊಟ್ಟೆಗಳನ್ನು ಇಡಲು ಇವು ಆಯ್ಕೆ ಮಾಡುತ್ತವೆ.

ಮೊಟ್ಟೆಯಿಂದ ಹೊರ ಬರುವ ಲಾರ್ವಾ(ಹುಳು) ಎಲೆಯ ತುದಿಯನ್ನು ತಿಂದು, ಎಲೆಯ ಮಧ್ಯನಾಳ(ಮಿಡ್ ರಿಬ್)ವನ್ನು ಬಿಟ್ಟು ಬಿಡುತ್ತದೆ. ಇದರಿಂದ ಎಲೆಯ ಮಧ್ಯನಾಳ ಒಣಗಿ ಕಂದುಬಣ್ಣಕ್ಕೆ ತಿರುಗುತ್ತದೆ. ಮುಂದೆ ಈ ಒಣಗಿದ ಎಲೆಯ ತುದಿಯ ಮೇಲೆ ಕುಳಿತು ಕೊಳ್ಳುವ ಈ ಹುಳ, ತನ್ನ ಮಲವನ್ನು ತಾನೇ ಹೊರಸೂಸುವ ರೇಷ್ಮೆ ಬಲೆಯೊಂದಿಗೆ ಸಿಲುಕಿಸಿ, ಅದನ್ನು ಎಲೆಯ ಮಧ್ಯನಾಳ ಮೇಲೆ ಅಂಟಿಸಿಕೊಳ್ಳುತ್ತದೆ. ಇದರಿಂದ ಎಲೆಯ ಮಧ್ಯನಾಳದ ಉದ್ದ ಹೆಚ್ಚಿ ದಂತೆ ಕಾಣುತ್ತದೆ.

ಈ ಮೂಲಕ ಮಲದ ಸರಪಳಿಯನ್ನು ನಿರ್ಮಿಸಿಕೊಳ್ಳುತ್ತದೆ. ಹುಳ ಮತ್ತೆ ಅವುಗಳ ಮಧ್ಯದಲ್ಲಿ ಬೆರೆತು ತನ್ನನ್ನು ಮರೆಮಾಚಿಕೊಳ್ಳುತ್ತದೆ. ಈ ರಚನೆಯು ದೈಹಿಕ ಮತ್ತು ರಾಸಾಯನಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಹುಳದ ವಾಸನೆಯನ್ನು ತಡೆದು, ಇರುವೆ ಮತ್ತು ಇತರ ಕೀಟಗಳು ಹಾಗೂ ಶತ್ರುಗಳಿಂದ ದೂರ ಇಡುತ್ತದೆ.

ವಿಶ್ರಾಂತಿ ಸಂದರ್ಭದಲ್ಲಿ ಹುಳ ತನ್ನ ತಲೆಯನ್ನು ಬದಿಗೆ ಮಡಿಸಿಕೊಂಡು, ಹಕ್ಕಿಯ ಮಲ ಅಥವಾ ಒಣಗಿದ ದೊಡ್ಡಿಯಂತೆ ತೋರಿಸಿಕೊಳ್ಳುತ್ತದೆ. ಕ್ರಮೇಣ ಹುಳ ಆ ಎಲೆಗಳನ್ನು ತಿಂದು ಬಿಡುತ್ತದೆ. ಮುಂದೆ ಹುಳ ಪೂರ್ಣ ಪ್ರಮಾಣದಲ್ಲಿ ಬೆಳೆದು, ಕೋಶವಾಗಿ ಪರಿವರ್ತನೆಗೊಳ್ಳಲು ಎಲೆಯ ಕೆಳಭಾಗ ಅಥವಾ ಮರದ ಇತರ ಗಟ್ಟಿಭಾಗಗಳನ್ನು ಆಯ್ದುಕೊಳ್ಳುತ್ತದೆ. ಈ ಕೋಶವು ಒಣ ಕೊಂಬಿನ ತುಂಡಿನಂತೆ ಗೋಚರಿಸುತ್ತದೆ. ಈ ಹಂತದಲ್ಲಿ ಹುಳ ಸಂಪೂರ್ಣ ಚಿಟ್ಟೆಯಾಗಿ ರೂಪಾಂತರಗೊಳ್ಳುತ್ತದೆ.

‘ಬಹುಶಃ ಬಹುಕಾಲ ಹಿಂದೆ ಕಮಾಂಡರ್ ಚಿಟ್ಟೆಯ ಹುಳಗಳು ಆಕಸ್ಮಿಕವಾಗಿ ತಮ್ಮ ಮಲವನ್ನು ಎಲೆಯ ಮಧ್ಯನಾಳ(ಮಿಡ್‌ರಿಬ್)ದ ಮೇಲೆ ಬಿಟ್ಟಿರಬಹುದು. ಆ ಮಲದ ತುಂಡುಗಳು ಸಣ್ಣ ಪರಭಕ್ಷಗಳನ್ನು ಮುಂದೆ ಸಾಗದಂತೆ ಅಡ್ಡ ಹಾಕಿದರಿಂದ, ಆ ಹುಳಗಳು ಸ್ವಲ್ಪ ಹೆಚ್ಚು ಬದುಕುವ ಅವಕಾಶ ಪಡೆದಿರಬಹುದು. ಆಕಸ್ಮಿಕವಾಗಿ ಪ್ರಾರಂಭವಾದ ಈ ಪ್ರಕ್ರಿಯೆ ಕ್ರಮೇಣ ಪೀಳಿಗೆಗಳಿಂದ ಪೀಳಿಗೆಗೆ ಸಾಗುವಾಗ ವಿಶ್ವಾಸಾರ್ಹ ರಕ್ಷಣಾ ತಂತ್ರವಾಗಿ ಬದಲಾಗಿರಬಹುದು. ಬದುಕಲು ತ್ಯಾಜ್ಯ ಕೂಡ ಒಂದು ಆಯುಧವಾಗಬಹುದು ಎಂಬುದನ್ನು ಇದು ತೋರಿಸುತ್ತದೆ’

-ಸಮ್ಮಿಲನ್ ಶೆಟ್ಟಿ, ಸಮ್ಮಿಲನ್ ಚಿಟ್ಟೆ ಪಾರ್ಕ್, ಬೆಳುವಾಯಿ

Ads on article

Advertise in articles 1

advertising articles 2

Advertise under the article