ಕೋಗಿಲು ಬಡಾವಣೆ ಮನೆಗಳ ತೆರವು ಸ್ಥಳಕ್ಕೆ ಭೇಟಿ ನೀಡಿದ ಸಚಿವ ಝಮೀರ್ ಅಹ್ಮದ್ ಖಾನ್! ನಾಳೆ ನಡೆಯುವ ಸಭೆಯ ಬಗ್ಗೆ ಹೇಳಿದ್ದೇನು...?

ಕೋಗಿಲು ಬಡಾವಣೆ ಮನೆಗಳ ತೆರವು ಸ್ಥಳಕ್ಕೆ ಭೇಟಿ ನೀಡಿದ ಸಚಿವ ಝಮೀರ್ ಅಹ್ಮದ್ ಖಾನ್! ನಾಳೆ ನಡೆಯುವ ಸಭೆಯ ಬಗ್ಗೆ ಹೇಳಿದ್ದೇನು...?

ಬೆಂಗಳೂರು: ಇಲ್ಲಿನ ಕೋಗಿಲು ಬಡಾವಣೆ ಮನೆಗಳ ಧ್ವಂಸ ವಿಚಾರದಲ್ಲಿ ನಾಳೆ(ಡಿಸೆಂಬರ್ 29) ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಭೆ ಕರೆದಿದ್ದಾರೆ. ಅದಾದ ಬಳಿಕ ಸಿಎಂ ನಿರ್ಧಾರ ತೆಗೆದುಕೊಳ್ಳಬಹುದು. ನಾಳೆ ಈ ಬಗ್ಗೆ ಸಿಹಿಸುದ್ದಿ ಸಿಗಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ರವಿವಾರ ಕೋಗಿಲು ಬಳಿಯ ಫಕೀರ್ ಲೇಔಟ್ ಹಾಗೂ ವಸೀಮ್ ಲೇಔಟ್ ಪ್ರದೇಶಕ್ಕೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 

ಬೆಂಗಳೂರು ನಗರದ ಯಲಹಂಕ ಸಮೀಪವಿರುವ ಕೋಗಿಲು ಬಡಾವಣೆಯ ಫಕೀರ್ ಕಾಲೋನಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಅಧಿಕಾರಿಗಳು ಸುಮಾರು 180 ಮನೆಗಳನ್ನು ನೆಲಸಮಗೊಳಿಸಿದ್ದು 2,500ಕ್ಕೂ ಹೆಚ್ಚು ಜನ ಬೀದಿಪಾಲಾಗಿದ್ದಾರೆ. 14 ಎಕರೆ 36 ಗುಂಟೆ ವಿಸ್ತೀರ್ಣದ ಪಾಲಿಕೆ ಜಾಗದಲ್ಲಿ 180 ಮನೆಗಳನ್ನು ಅಕ್ರಮವಾಗಿ ನಿರ್ಮಿಸಿಕೊಂಡಿದ್ದಾರೆ ಎಂಬುದು ಆಡಳಿತದ ಆರೋಪ.

ಈ ಸ್ಥಳಕ್ಕೆ ಭೇಟಿ ನೀಡಿದ ವಸತಿ ಸಚಿವ ಝಮೀರ್ , “ಬಹಳ ವರ್ಷಗಳಿಂದ ಇವರು ಇಲ್ಲೇ(ಕೋಗಿಲು ಬಡಾವಣೆ) ವಾಸಿಸುತ್ತಿದ್ದವರು. ಅವರಿಗೆ ಏನೋ ಒಂದು ವ್ಯವಸ್ಥೆ ಮಾಡಬೇಕಾಗಿತ್ತು. ಅವರು ಯಾವ ರೀತಿ ಜೀವನ ಮಾಡುತ್ತಿದ್ದಾರೆ ಎಂಬುದು ನಮ್ಮ ಕಣ್ಣ ಮುಂದಿದೆ. ನಮಗೆಲ್ಲರಿಗೂ ಗೊತ್ತಿರುವಂತೆ ಅಕ್ರಮವಾಗಿ ವಾಸಿಸುತ್ತಿದ್ದರು. ಕಂದಾಯ ಸಚಿವ ಕೃಷ್ಣ ಬೈರೇಗೌಡರು ಮೂರ್ನಾಲ್ಕು ನೋಟಿಸ್ ನೀಡಿದ್ದಾರೆ. ಇವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ” ಎಂದಿದ್ದಾರೆ.

“ಮನೆಗಳನ್ನು ಧ್ವಂಸಗೊಳಿಸುವುದಕ್ಕೂ ಮುನ್ನ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ, ರಾತ್ರೋರಾತ್ರಿ ಧ್ವಂಸ ಮಾಡಲಾಗಿದೆ ಎಂದು ಪ್ರಚಾರವಾಗುತ್ತಿದೆ. ಆದರೆ ವಾಸ್ತವದಲ್ಲಿ ಬೇರೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಕೃಷ್ಣ ಬೈರೇಗೌಡರು ಹತ್ತಿರದ ಐದು ಚೌಟರಿಗಳಲ್ಲಿ ಊಟ, ವಸತಿ ಎಲ್ಲ ವ್ಯವಸ್ಥೆ ಮಾಡಿದ್ದರು. ನನ್ನ ಜತೆ ಮಾತನಾಡಿ ಇವರಿಗೆ ಮನೆ ಕಟ್ಟಿಕೊಡುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಆದರೆ ಇವರು ಯಾರೂ ಹೋಗಲು ತಯಾರಿರಲಿಲ್ಲ” ಎಂದು ಹೇಳಿದ್ದಾರೆ.

“ಇಲ್ಲಿ ನಾವು ಖಾಲಿ ಮಾಡಿದರೆ ನಮಗೆ ಬೇರೆ ಜಾಗ ಸಿಗುತ್ತದೆಯೋ ಇಲ್ಲವೋ ಎಂಬ ಭಯದಲ್ಲಿ ಜನರು ಕೋಗಿಲು ಬಡಾವಣೆಯಿಂದ ಕದಲುತ್ತಿಲ್ಲ. ಆ ಕಾರಣದಿಂದಾಗಿ ಸಿಎಂ ಜತೆ ಮಾತನಾಡಿದ್ದೇನೆ. ನಾಳೆ ಸಭೆ ಆದ ಬಳಿಕ ಖಂಡಿತ ಸಿಹಿಸುದ್ದಿ ಸಿಗಲಿದೆ” ಎಂದು ಭರವಸೆ ನೀಡಿದ್ದಾರೆ.

“ನಮಗೆ ಗೊತ್ತಿರುವ ಹಾಗೆ ಇಲ್ಲ ಕೇರಳ ನಿವಾಸಿಗಳು ಯಾರೂ ಇಲ್ಲ. ಇದೇ ತರ ಉತ್ತರ ಪ್ರದೇಶದಲ್ಲಿ ಮನೆಗಳನ್ನು ‘ಬುಲ್ಡೋಜ್’ ಮಾಡಿದ್ದರು. ಆವಾಗ ಕೇರಳ ಮುಖ್ಯಮಂತ್ರಿ ಉತ್ತರ ಪ್ರದೇಶಕ್ಕೆ ಯಾಕೆ ಹೋಗಿಲಿಲ್ಲ? ಅವಾಗ ಚುನಾವಣೆ ಇರಲಿಲ್ಲ. ಈಗ ಏಪ್ರಿಲ್‌ನಲ್ಲಿ ಚುನಾವಣೆ ಇರುವ ಕಾರಣದಿಂದಾಗಿ ಈ ರಾಜಕೀಯ ನಡೆಯುತ್ತಿದೆ. ಕೇರಳ ಸಿಎಂಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಕೇರಳದ ವತಿಯಿಂದ ಅನುದಾನ ಕೊಡಬೇಕಾಗಿತ್ತು” ಎಂದು ಟೀಕಿಸಿದರು.

“ಕೇರಳದಲ್ಲಿ ಪ್ರವಾಹ ಸಂತ್ರಸ್ತರಿಗೆ ನೂರು ಮನೆಗಳನ್ನು ಕಟ್ಟಿಕೊಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು, ಅದರಂತೆ ಮನೆ ಕಟ್ಟಿಕೊಡುತ್ತಿದ್ದೇವೆ. ಆ ರೀತಿ ಘೋಷಣೆ ಮಾಡಬೇಕಾಗಿತ್ತು. ಆದರೆ ಇದು ಬರೀ ರಾಜಕೀಯ” ಎಂದು ದೂರಿದ್ದಾರೆ.

ಕೇರಳ ಸಿಎಂ ಹೇಳಿದ್ದೇನು?

ಕೋಗಿಲು ಬಡಾವಣೆ ಮನೆಗಳ ಧ್ವಂಸ ಪ್ರಕರಣದ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಬೆಂಗಳೂರಿನ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿ ವರ್ಷಗಳಿಂದ ವಾಸಿಸುತ್ತಿದ್ದ ಮುಸ್ಲಿಂ ಕುಟುಂಬಗಳನ್ನು ಬೀದಿಪಾಲು ಮಾಡಲಾಗಿದೆ. ಈ ಘಟನೆಯು ‘ಬುಲ್ಡೋಜರ್ ರಾಜ್ಯ’ದ ಕ್ರೂರ ಸಾಮಾನ್ಯೀಕರಣವನ್ನು ಬಹಿರಂಗಪಡಿಸಿದೆ” ಎಂದು ಹೇಳಿದ್ದಾರೆ.

“ಸಂಘ ಪರಿವಾರದ ಅಲ್ಪಸಂಖ್ಯಾತ ವಿರೋಧಿ ರಾಜಕೀಯವನ್ನು ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕಾರ್ಯಗತಗೊಳಿಸಲಾಗುತ್ತಿರುವುದು ದುಃಖಕರ ವಿಚಾರ” ಎಂದೂ ಪಿಣರಾಯಿ ಟೀಕಿಸಿದ್ದಾರೆ.

“ಭಯದ ವಾತಾವರಣ ಮತ್ತು ಕ್ರೂರವಾದ ಬಲ ಪ್ರಯೋಗದ ಮೂಲಕವೇ ಆಡಳಿತ ನಡೆಸುವಾಗ, ಸಾಂವಿಧಾನಿಕ ಮೌಲ್ಯಗಳು ಮತ್ತು ಮಾನವ ಘನತೆಯು ಮೊದಲು ಬಲಿಪಶುಗಳಾಗುತ್ತವೆ. ಈ ಕಪಟತನವನ್ನು ವಿರೋಧಿಸಲು ಮತ್ತು ಸೋಲಿಸಲು ಎಲ್ಲ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಶಕ್ತಿಗಳು ಒಂದಾಗಬೇಕು” ಎಂದು ಪಿಣರಾಯಿ ಕರೆ ನೀಡಿದ್ದಾರೆ. ಇದಾದ ಬಳಿಕ ಕೇರಳದ ನಿಯೋಗವೂ ಭೇಟಿ ನೀಡಿದೆ.

Ads on article

Advertise in articles 1

advertising articles 2

Advertise under the article