ಕೋಗಿಲು ಸಮೀಪ ಅನಧಿಕೃತ ಮನೆಗಳ ತೆರವು; ಕೇರಳ ಸಿಎಂ ಹೇಳಿಕೆ ರಾಜಕೀಯ ಪ್ರೇರಿತ: ಸಚಿವ ಈಶ್ವರ್ ಖಂಡ್ರೆ
ಬೀದರ್: ಕೇರಳ ಸಿಎಂ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಎಂದು ಬೆಂಗಳೂರಿನ ಕೋಗಿಲು ಬಳಿ ಮನೆ, ಶೆಡ್ ನೆಲಸಮ ವಿರೋಧಿಸಿ ಕೇರಳ ಸಿಎಂ ಟ್ವೀಟ್‌ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿ ಅವರ ಪಕ್ಷ ದೂಳಿಪಟವಾಗಿದೆ. ಹೀಗಾಗಿ ರಾಜಕೀಯ ದುರುದ್ದೇಶದಿಂದಾಗಿ ಬೆಂಗಳೂರಿನ ಕಾರ್ಯಾಚರಣೆಯನ್ನ ವಿರೋಧಿಸಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಲ್ಲಾ ಜಾತಿ, ಧರ್ಮದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಯಾರಿಗೂ ಅನ್ಯಾಯ ಮಾಡದೇ ಪರ್ಯಾಯ ವ್ಯವಸ್ಥೆ ಮಾಡುವ ಕೆಲಸ ಮಾಡುತ್ತೇವೆ. ಈಗಾಗಲೇ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ನಾವು ಯಾವಾಗಲು ಕೇರಳಕ್ಕೆ ಸಹಾಯ ಮಾಡುತ್ತಾ ಬಂದಿದ್ದೇವೆ. ಈ ರೀತಿ ಒಬ್ಬ ಸಿಎಂ ಹೇಳೋದು ಅವರ ಗೌರವಕ್ಕೆ ಶೋಭೆ ತರಲ್ಲ. ಕೇರಳ ಸಿಎಂ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಅವರ ಹೇಳಿಕೆಗೆ ಯಾವುದೇ ಬೆಲೆ ಇಲ್ಲ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮೈಸೂರಿನ ಅರಮನೆ ಮುಂಭಾಗದಲ್ಲಿ ಹೀಲಿಯಂ ಸ್ಫೋಟ ವಿಚಾರವಾಗಿ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಈಗಾಗಲೇ ಮಾನ್ಯ ಗೃಹ ಮಂತ್ರಿಗಳು ತನಿಖೆಗೆ ಆದೇಶ ಮಾಡಿದ್ದು, ಇದು ಸಿಎಂ ಸಿದ್ದರಾಮಯ್ಯ ಗಮನದಲ್ಲೂ ಇದೆ. ಇದರ ಬುಡ ಎಲ್ಲಿದೆ ಎಂದು ನಮ್ಮ ಪೊಲೀಸರು ತನಿಖೆ ಮಾಡುತ್ತಿದ್ದು, ಯಾರೆಲ್ಲ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.