'ದ್ವೇಷ ಭಾಷಣ ತಡೆ' ಮಸೂದೆಗೆ ಅಂಕಿತ ಹಾಕದಂತೆ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಬಿಜೆಪಿ ನಿಯೋಗ
ಬೆಂಗಳೂರು: ಬಿಜೆಪಿ ನಾಯಕರ ನಿಯೋಗ ಸೋಮವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿದೆ. ದ್ವೇಷ ಭಾಷಣ ತಡೆ ಮಸೂದೆಯನ್ನು "ಕ್ರೂರ", "ಸ್ವಾತಂತ್ರ್ಯದ ಮೇಲಿನ ನೇರ ದಾಳಿ" ಮತ್ತು "ರಾಜಕೀಯ ಸೇಡು ತೀರಿಸಿಕೊಳ್ಳುವ ಅಸ್ತ್ರ ಎಂದು ಕರೆದಿದ್ದು, ಅದಕ್ಕೆ ಒಪ್ಪಿಗೆ ನೀಡದಂತೆ ಮನವಿ ಮಾಡಿದೆ.
ವಿಧಾನ ಸಭೆ ಮತ್ತು ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ ಮತ್ತು ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ, ಬಳ್ಳಾರಿ ಘರ್ಷಣೆ ಬಗ್ಗೆ ಸಿಬಿಐ ತನಿಖೆ ಮತ್ತು ಕೋಗಿಲುವಿನಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಗಳ ಧ್ವಂಸಕ್ಕೆ ಸಂಬಂಧಿಸಿದಂತೆ ಸರ್ಕಾರದ ಕ್ರಮಕ್ಕೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿತು. ಅಲ್ಲದೇ ಹುಬ್ಬಳ್ಳಿಯಲ್ಲಿನ ಬಿಜೆಪಿ ಮಹಿಳಾ ಕಾರ್ಯಕರ್ತೆ ಮೇಲಿನ ಹಲ್ಲೆ ಆರೋಪ ಪ್ರಸ್ತಾಪಿಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದೆ.
ರಾಜ್ಯಪಾಲರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ರಾಜ್ಯಪಾಲರನ್ನು ಭೇಟಿಯಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಗೂಂಡಾ ರಾಜ್ಯವಾಗಿದೆ ಎಂಬ ಮಾಹಿತಿ ನೀಡಿದ್ದೇವೆ. ಯಾವುದನ್ನು ಪ್ರಶ್ನಿಸುವುದಕ್ಕೆ ಅವಕಾಶ ಇಲ್ಲದೆ ಕರ್ನಾಟಕ ಜಂಗಲ್ ರಾಜ್ ಆಗಿದೆ. ರಾಜ್ಯದ ಮೊದಲ ಪ್ರಜೆಯಾಗಿ ಅವರ ಹೆಸರಿನಲ್ಲಿ ಸರ್ಕಾರದ ಎಲ್ಲಾ ಆದೇಶಗಳು ಜಾರಿಗೆ ಬರುತ್ತವೆ. ಗೂಂಡಾ ರಾಜ್ಯದಿಂದ ಕರ್ನಾಟಕವನ್ನು ರಕ್ಷಿಸುವಂತೆ ರಾಜ್ಯಪಾಲರಲ್ಲಿ ಮನವಿ ಮಾಡಿದ್ದೇವೆ. ಇತ್ತೀಚಿಗೆ ರಾಜ್ಯ ವಿಧಾನಮಂಡಲದಿಂದ ಅನುಮೋದನೆಗೊಂಡಿರುವ ದ್ವೇಷ ಭಾಷಣ ತಡೆ ಮಸೂದೆಗೆ ಅಂಕಿತ ಹಾಕಿದಂತೆ ಒತ್ತಾಯಿಸಿರುವುದಾಗಿ ಎಂದು ತಿಳಿಸಿದರು.
ವಿಧಾನಸಭೆಯಲ್ಲಿ ಯಾವುದೇ ಚರ್ಚೆ ಇಲ್ಲದೆ ದ್ವೇಷ ತಡೆ ಭಾಷಣ ಮಸೂದೆ ಅನುಮೋದನೆಯಾಗಲು ಸಿಎಂ ಸಿದ್ದರಾಮಯ್ಯ ಹಾಗೂ ಸ್ಪೀಕರ್ ಯು ಟಿ ಖಾದರ್ ಅನುವು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ ಅಶೋಕ್, ಆಡಳಿತಾರೂಢ ಕಾಂಗ್ರೆಸ್ ನಿಂದ ಇದು ಕುತಂತ್ರವಲ್ಲದೇ ಮತ್ತೇನಿಲ್ಲ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಂತೆ ಇದನ್ನು ಮಾಡಲಾಗುತ್ತಿದೆ. ಒಂದು ವೇಳೆ ಮಸೂದೆಗೆ ಅಂಕಿತ ಹಾಕಿದರೆ ಮಾಧ್ಯಮಗಳು, ವಿರೋಧ ಪಕ್ಷಗಳ ಹಕ್ಕನ್ನು ಕಸಿದುಕೊಳ್ಳಲಿದೆ ರಾಜ್ಯ ಪೊಲೀಸ್ ರಾಜ್ಯವಾಗಲಿದೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಇಂತಹ ಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಹಾಗಾಗಿ, ಮಸೂದೆಗೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಬಳ್ಳಾರಿಯಲ್ಲಿ ಘರ್ಷಣೆ ಪ್ರಕರಣವನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಬ್ಯಾನರ್ ಕಟ್ಟುವ ವೇಳೆ ಬಿಜೆಪಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಟಾರ್ಗೆಟ್ ಮಾಡಿ ಗುಂಡು ಹಾರಿಸಲಾಗಿದೆ. ಆದರೆ ಸರ್ಕಾರದ ತನಿಖೆಯ ಹಾದಿಯ ಹಳಿ ತಪ್ಪಿಸುತ್ತಿದೆ. ಈ ಘಟನೆ ಹಿಂದಿನವರನ್ನು ಸರ್ಕಾರ ಇನ್ನೂ ಬಂಧಿಸಿಲ್ಲ. ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದರು.
ಕೋಗಿಲುವಿನಲ್ಲಿ ಮನೆ ಕಳೆದುಕೊಂಡವರಿಗೆ ಮತ್ತೆ ಮತ್ತೆ ಕಟ್ಟಿಕೊಡುವ ಸರ್ಕಾದ ನಿರ್ಧಾರವನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ವಿವಿಧ ವಸತಿ ಯೋಜನೆಯಡಿ ಮನೆಗಾಗಿ ಸುಮಾರು 36 ಲಕ್ಷ ಜನರು ಹಣ ಪಾವತಿಸಿ, ಮನೆಗಾಗಿ ಇನ್ನೂ ಕಾಯುತ್ತಿದ್ದಾರೆ. ಕೋಗಿಲುವಿನಲ್ಲಿ ಅಕ್ರಮವಾಗಿ ಮನೆ ಕಟ್ಟು ಸರ್ಕಾರವೇ ಧ್ವಂಸಗೊಳಿಸಿದ ವಲಸಿಗರಿಗೆ ಮನೆಗಳನ್ನು ಹಂಚಲಾಗಿದೆ. ಮುಸ್ಲಿಂರ ಒಲೈಕೆಯಿಂದಾಗಿ ಕೇರಳ ಕಾಂಗ್ರೆಸ್ ನಾಯಕರ ಒತ್ತಡದಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಅಶೋಕ್ ಆರೋಪಿಸಿದರು.