ರಾಜ್ಯ ಸರಕಾರದಿಂದ ಉಡುಪಿ ಪರ್ಯಾಯೋತ್ಸವ ಕಡೆಗಣನೆ: ಕುತ್ಯಾರು ನವೀನ್ ಶೆಟ್ಟಿ ಕಿಡಿ
ಉಡುಪಿ: ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಹಾಗೂ ಭಕ್ತರನ್ನು ಆಕರ್ಷಿಸುವ ಕರಾವಳಿ ಕರ್ನಾಟಕದ ನಾಡ ಹಬ್ಬ ಎಂದೇ ಪ್ರಸಿದ್ಧಿ ಪಡೆದಿರುವ ಉಡುಪಿ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ನಗರದ ರಸ್ತೆ ಅಭಿವೃದ್ಧಿ ಸಹಿತ ಮೂಲ ಸೌಕರ್ಯ ವೃದ್ಧಿಗೆ ರಾಜ್ಯ ಸರಕಾರ ಯಾವುದೇ ಅನುದಾನ ನೀಡದೆ ಪರ್ಯಾಯೋತ್ಸವವನ್ನು ಕಡೆಗಣಿಸಿರುವುದು ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.
ಕಳೆದ ಪರ್ಯಾಯೋತ್ಸವದ ಸಂದರ್ಭದಲ್ಲಿಯೂ ಮೂಲ ಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಸರಕಾರದಿಂದ ರೂ.10 ಕೋಟಿ ಅನುದಾನವನ್ನು ಮಂಜೂರು ಮಾಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಘೋಷಣೆ ಮಾಡಿದ್ದು, ಇದೀಗ 2 ವರ್ಷ ಸಂದರೂ ಚಿಕ್ಕಾಸೂ ಬಿಡುಗಡೆಯಾಗದಿರುವುದು ವಿಶಾದನೀಯವಾಗಿದೆ.
ಇದೀಗ ಜಿಲ್ಲೆಯ ಎಲ್ಲಾ ಐದು ಶಾಸಕರುಗಳ ಸಂಘಟಿತ ಪ್ರಯತ್ನದ ಫಲವಾಗಿ ಜಿಲ್ಲಾ ವ್ಯಾಪ್ತಿಯ ಗಣಿ ಇಲಾಖೆಯಲ್ಲಿ ಸಂಗ್ರಹವಾಗಿರುವ ರಾಜಧನದಲ್ಲಿ ಸುಮಾರು ರೂ.6 ಕೋಟಿ ಮೊತ್ತವನ್ನು ಉಡುಪಿ ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಮೀಸಲಿಟ್ಟಿರುವುದನ್ನು ತನ್ನದೇ ಸಾಧನೆ ಎಂದು ಬೀಗುತ್ತಾ ರಾಜ್ಯ ಸರಕಾರದ ಅನುದಾನ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿ ನೀಡುತ್ತಾ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಗಣಿ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನತೆ ಮರಳು, ಕೆಂಪು ಕಲ್ಲು, ಶಿಲೆ ಕಲ್ಲುಗಳ ಬಳಕೆಗೆ ಪಾವತಿಸಿರುವ ತೆರಿಗೆ ಮೊತ್ತ ಜಿಲ್ಲೆಯ ಅಭಿವೃದ್ಧಿ ಕೆಲಸ ಕಾರ್ಯಗಳಿಗೇ ವಿನಿಯೋಗವಾಗಬೇಕೆಂಬ ನೆಲೆಯಲ್ಲಿ ಜಿಲ್ಲೆಯ ಶಾಸಕರು ತೋರಿದ ಒಗ್ಗಟ್ಟು ಜಿಲ್ಲೆಯ ಮುಂದಿನ ಅಭಿವೃದ್ಧಿಗೆ ಹೊಸ ನಾಂದಿ ಹಾಡಿದೆ.
ಈ ನಿಟ್ಟಿನಲ್ಲಿ ಗಣಿ ಇಲಾಖೆಯ ರಾಜಧನ ಸಂಗ್ರಹದ ನಿಗದಿತ ಮೊತ್ತವನ್ನು ಪರ್ಯಾಯೋತ್ಸವದ ಪ್ರಯುಕ್ತ ಉಡುಪಿ ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸಲು ಸಂಘಟಿತರಾಗಿ ಕೈಜೋಡಿಸಿದ ಜಿಲ್ಲೆಯ ಕ್ರಿಯಾಶೀಲ ಶಾಸಕರುಗಳಾದ ಯಶ್ಪಾಲ್ ಎ.ಸುವರ್ಣ, ವಿ.ಸುನೀಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ ಮತ್ತು ಗುರುರಾಜ್ ಗಂಟಿಹೊಳೆ ಅವರಿಗೆ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವ ಜೊತೆಗೆ ಕರಾವಳಿಯ ನಾಡ ಹಬ್ಬವಾಗಿರುವ ಉಡುಪಿ ಪರ್ಯಾಯೋತ್ಸವ ರಾಜ್ಯದ ನಾಡ ಹಬ್ಬವಾಗಿ ಮೂಡಿ ಬರುವಂತಾಗಲಿ ಎಂದು ಆಶಿಸುವುದಾಗಿ ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.