ಉಡುಪಿ ಸಂತೆಕಟ್ಟೆಯಲ್ಲಿ ಜ.26ರಂದು ಬಾಲ ಯುಗ್ಮ ಭರತನಾಟ್ಯ
ಉಡುಪಿ: ಉಡುಪಿ ಅಮ್ಮುಂಜೆಯ ಶ್ರೀ ಭ್ರಾಮರಿ ನಾಟ್ಯಾಲಯದ ರಜತ ಸಂಭ್ರಮದ ಪ್ರಯುಕ್ತ ಬಾಲ ಪ್ರತಿಭೆಗಳಿಂದ ಭರತ ನಾಟ್ಯ ` ಬಾಲ ಯುಗ್ಮ ನೃತ್ಯ ' ಕಾರ್ಯಕ್ರಮ ಜ.26ರಂದು ಸಂತೆಕಟ್ಟೆ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಸಂಜೆ 5 ಗಂಟೆಯಿಂದ ನಡೆಯಲಿದೆ.
ಈ ಬಗ್ಗೆ ಸಂಸ್ಥೆಯ ವಿದ್ವಾನ್ ಕೆ.ಭವಾನಿಶಂಕರ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಕೆಮ್ಮಣ್ಣು ಪಡುಕುದ್ರು ಶ್ರೀಗಣಪತಿ ಮಠದ ಅರ್ಚಕ ನೆಂಪು ಶ್ರೀಧರ ಭಟ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಿದ್ದಕಟ್ಟೆಯ ನಾಟ್ಯಾಯನ ಕಲಾ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಕೆ.ವಿ.ರಮಣಾಚಾರ್ಯ, ಕೆಮ್ಮಣ್ಣು ಗಣಪತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ.ಸತೀಶ್ ಶೆಟ್ಟಿ, ಸಂತೆಕಟ್ಟೆ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಜ್ಯೋತಿ ಪ್ರಕಾಶ್ ಶೆಟ್ಟಿಗಾರ್ ಉಪಸ್ಥಿತರಿರುವರು ಎಂದರು.
ಬಾಲ ಯುಗ್ಮ ನೃತ್ಯ : ಕಾರ್ಯಕ್ರಮದಲ್ಲಿ ಅರಳು ಪ್ರತಿಭೆಗಳಾದ ನಿವೇದಿತಾ ಕೆ.ಪೂಜಾರಿ ಹಾಗೂ ಕನಿಷ್ಕ ಎನ್.ರಾವ್, ಕ್ಷಿತಿ ಬಿ.ಪೂಜಾರಿ ಹಾಗೂ ಸೃಷ್ಟಿ ಅರುಣ್ ಜೆ. ಹಾಗೂ ಕಾಯಿರಾ ಸಚಿನ್ ಸುವರ್ಣ ಹಾಗೂ ವೈಷ್ಣವಿ ಅವರಿಂದ ಭರತ ನಾಟ್ಯ ಪ್ರಸ್ತುತಿ ನಡೆಯಲಿದೆ. ನೃತ್ಯ ಸಂಯೋಜನೆ ಮತ್ತು ನಟುವಾಂಗ ಗುರು ವಿದ್ವಾನ್ ಕೆ. ಭವಾನಿ ಶಂಕರ್ ಅಮ್ಮುಂಜೆ, ಹಾಡುಗಾರಿಕೆ ವಿನೀತ್ ಪುರವನ್ನರ್ ಕೇರಳ, ಮೃದಂಗ ಗಿತೇಶ್ ಗೋಪಾಲಕೃಷ್ಣ ನಿಲೇಶ್ವರ, ಕೊಳಲು ರಾಹುಲ್ ಸಿ. ರಾಮ್ ಕಣ್ಣೂರು ಸಹಕರಿಸಲಿದ್ದಾರೆ. ಯೋಗೀಶ್ ಕೊಳಲಗಿರಿ ನಿರೂಪಿಸಲಿದ್ದಾರೆ.
ಕಳೆದ 2000ದಲ್ಲಿ ಆರಂಭಗೊಂಡ ಶ್ರೀ ಭ್ರಾಮರಿ ನಾಟ್ಯಾಲಯ ರಜತ ಮಹೋತ್ಸವದ ಆಚರಣೆಯ ಪ್ರಯುಕ್ತ ಪ್ರತೀ ತಿಂಗಳು 2 ಕಾರ್ಯಕ್ರಮಗಳಂತೆ ವರ್ಷ ಪೂರ್ತಿ 25 ಕಾರ್ಯಕ್ರಮಗಳನ್ನು ನಡೆಸುವ ಯೋಜನೆ ಹಾಕಿಕೊಂಡಿದೆ. ಸಂಸ್ಥೆಯ ವಿದ್ಯಾರ್ಥಿಗಳಿಂದಲೇ ಏಕವ್ಯಕ್ತಿ ಪ್ರದರ್ಶನ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ನೃತ್ಯ ಪ್ರಾತ್ಯಕ್ಷಿಕೆಗಳನ್ನು ನೀಡುವುದರ ಮೂಲಕ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಹೊತ್ತಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಲಹೆಗಾರ ಯೋಗೀಶ್ ಗಾಣಿಗ ಕೊಳಲಗಿರಿ, ದೀಪ್ತಿ ಸುವರ್ಣ ಹಾಗೂ ನಂದ ಕುಮಾರ್ ಉಪಸ್ಥಿತರಿದ್ದರು.