ಉಚ್ಚಿಲ ಎಕ್ಸ್‌ಪ್ರೆಸ್ ಬಸ್ ನಿಲ್ದಾಣದ ಬಳಿ ಬೈಕ್ ಡಿಕ್ಕಿ; ಪಾದಾಚಾರಿ ಮೃತ್ಯು
Thursday, January 8, 2026
ಉಚ್ಚಿಲ: ಇಲ್ಲಿನ ಎಕ್ಸ್‌ಪ್ರೆಸ್ ಬಸ್ ನಿಲ್ದಾಣದ ಬಳಿ ಬೈಕ್ ಡಿಕ್ಕಿಯಾಗಿ ಪಾದಾಚಾರಿ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಮೃತ ವ್ಯಕ್ತಿಯನ್ನು ಪಣಿಯೂರು ಸೆಂಟರ್ ನಿವಾಸಿ ಸದಾಶಿವ ಕೋಟ್ಯಾನ್(65) ಎಂದು ಗುರುತಿಸಲಾಗಿದೆ.
ಅವರು ಗುರುವಾರ ಬೆಳಗ್ಗೆ 9.45ರ ಸುಮಾರಿಗೆ ರಸ್ತೆ ದಾಟುತ್ತಿದ್ದಾಗ, ಪಡುಬಿದ್ರಿ ಕಡೆಯಿಂದ ಕಾಪು ಕಡೆಗೆ ಸಾಗುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಅವರನ್ನು ಮೂಳೂರು ಎಸ್ಡಿಪಿಐ ಆಂಬುಲೆನ್ಸ್ ಮೂಲಕ ಸಮಾಜ ಸೇವಕ ಜಲಾಲುದ್ದೀನ್ ಜಲ್ಲು ಮತ್ತು ಆಂಬುಲೆನ್ಸ್ ಹಮೀದ್ ಅವರು ಉಡುಪಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿಯ ವೈದ್ಯರು ಮೃತ ಘೋಷಿಸಿದ್ದಾರೆ. ಮೃತದೇಹವನ್ನು ಉಡುಪಿ ಅಜ್ಜರ ಕಾಡು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತರು ಮೂಳೂರಿನ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದು, ಮನೆಯಿಂದ ಹೊಟೇಲಿಗೆ ಬರುತ್ತಿದ್ದಾಗ, ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪಡುಬಿದ್ರಿ ಪೋಲಿಸರು ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.