
ಅಮಾಸೆಬೈಲಿನ ಬೆಳ್ಮನೆಯಲ್ಲಿ ಪ್ರಭಾವಿಗಳಿಂದ ಸರಕಾರಿ ಜಾಗ ಒತ್ತುವರಿ: ಅಧಿಕಾರಿಗಳು ಶಾಮೀಲು- ಸ್ಥಳೀಯರ ಆರೋಪ
ಉಡುಪಿ (Headlines Kannada): ಕೆಲವೊಂದು ಪ್ರಭಾವಿಗಳು ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಸರಕಾರಿ ರಸ್ತೆಯನ್ನೇ ಒತ್ತುವರಿ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದ ಬೆಳ್ಮನೆ ಎಂಬಲ್ಲಿ ನಡೆದಿದೆ. ಸಾರ್ವಜನಿಕ ರಸ್ತೆಯನ್ನೆ ಕಬಳಿಕೆ ಮಾಡಿದರೂ, ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದೀಗ ಸ್ಥಳೀಯ ನಿವಾಸಿಗಳು ಸಂಪರ್ಕ ರಸ್ತೆಯಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ.
ಈ ಸಮಸ್ಯೆಯ ಕುರಿತು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ದಿನಕರ್ ಶೆಟ್ಟಿ ಬಳ್ಮನೆ ಅಡ್ಡಹೊಳೆ ಅವರು, ಅಮಾಸೆಬೈಲು ಗ್ರಾಮದ ಬಳ್ಮನೆಯಲ್ಲಿ 8ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಇವರಿಗೆ ಬಳ್ಮನೆ ಬೈಲ್‌ನಿಂದ ಬಳ್ಮನೆ ಹತ್ರಪಾಲುವರೆಗೆ ಮಣ್ಣಿನ ಸಂಪರ್ಕ ರಸ್ತೆ ಇದೆ. ಈ ರಸ್ತೆ ಅನೇಕ ವರ್ಷಗಳಿಂದ ಸಂಪರ್ಕದ ಕೊಂಡಿಯಾಗಿದ್ದು, 2020ರಲ್ಲಿ ರಸ್ತೆಯ ಅಭಿವೃದ್ಧಿ ಬಗ್ಗೆ ಜಿಲ್ಲಾ ಪಂಚಾಯಿತಿನಿಂದ 5 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು ಎಂದರು.
2020 ಅಕ್ಟೋಬರ್ ತಿಂಗಳಲ್ಲಿ ಬಳ್ಮನೆ ನಿವಾಸಿಗಳಾದ ಅವಿನಾಶ ಹೆಗ್ಡೆ, ಬಿ.ಕೆ. ಸತೀಶ ಶೆಟ್ಟಿ ಹಾಗೂ ಅಶೋಕ ಶೆಟ್ಟಿ ಎಂಬ ಮೂವರು ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿಕೊಂಡು, ಸರಕಾರಿ ಜಾಗದಲ್ಲಿ ಹಾದು ಹೋಗಿರುವ ಗ್ರಾಪಂನ ಅನುದಾನಿತ ರಸ್ತೆಯನ್ನು ಜೆಸಿಬಿ ಮೂಲಕ ಅಗೆದು ಕಂದಕ ನಿರ್ಮಿಸಿದ್ದಾರೆ. ಆ ಮೂಲಕ ಇಲ್ಲಿನ ನಿವಾಸಿಗಳು ಓಡಾಡದಂತೆ ತಡೆಯೊಡ್ಡಿದ್ದಾರೆ. ಈ ಬಗ್ಗೆ ಡಿಸಿ, ಎಸಿ, ಕಂದಾಯ ಇಲಾಖೆ, ಗ್ರಾಮ ಲೆಕ್ಕಾಕಾರಿ, ಅರಣ್ಯ ಇಲಾಖೆಗೆ ಮನವಿ ಕೊಟ್ಟರೂ ಪ್ರಯೋಜನವಿಲ್ಲ. ಈ ವ್ಯಕ್ತಿಗಳ ಜೊತೆಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದೂರಿದರು.
ಇದೀಗ ಸರಕಾರಿ ಜಾಗವನ್ನು ಅಕ್ರಮವಾಗಿ ಭೂ ಸ್ವಾಧೀನ ಮಾಡಿಕೊಂಡಿರುವುದರಿಂದ ಇಲ್ಲಿ ವಾಸಿಸುತ್ತಿರುವ ಜನರಿಗೆ ಓಡಾಡಲು ರಸ್ತೆ ಇಲ್ಲದಂತೆ ಆಗಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತುಕೊಂಡು ಅಕ್ರಮವಾಗಿ ರಸ್ತೆ ಹಾಳು ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪಂಚಾಯಿತಿನಿಂದ ನಿರ್ಮಾಣವಾಗಿರುವ ರಸ್ತೆಯ ಯಥಾಸ್ಥಿತಿ ಕಾಯ್ದಿರಿಸಲು ಅಥವಾ ರಸ್ತೆ ರಿಪೇರಿಗೆ ತಗಲುವ ವೆಚ್ಚವನ್ನು ಖಾಸಗಿ ವ್ಯಕ್ತಿಗಳಿಂದ ವಸೂಲಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.