'ನೀವು ತುಂಬಾ ದಪ್ಪಗಿದ್ದೀರಾ' ಎಂದು ಮಹಿಳೆಗೆ ವಿಮಾನ ಹತ್ತಲು ಬಿಡದ ಕತಾರ್ ಏರ್‌ವೇಸ್! ಕೋರ್ಟ್ ಮೆಟ್ಟಿಲೇರಿದ ಮಹಿಳೆಗೆ ಸಿಕ್ಕಿದ್ದೇನು..?
'ನೀವು ತುಂಬಾ ದಪ್ಪಗಿದ್ದೀರಾ (ಯುವರ್ ಟೂ ಫ್ಯಾಟ್)’ ಎಂದು ಸ್ಥೂಲಕಾಯದ ಬ್ರೆಝಿಲ್ ಮೂಲದ ಮಹಿಳೆಯೊಬ್ಬರಿಗೆ ಬೋರ್ಡಿಂಗ್ ಪಾಸ್ ನೀಡಲು ಕತಾರ್ ಏರ್‌ವೇಸ್‌ನ ಸಿಬ್ಬಂದಿ ನಿರಾಕರಿಸಿದ್ದರು.
ಬೈರುತ್‌ನಿಂದ ದೋಹಾಗೆ ಹೊರಟಿದ್ದ 38 ವರ್ಷದ ಮಹಿಳೆಯೊಬ್ಬರು ತನ್ನನ್ನು ವಿಮಾನ ಹತ್ತಲು ಬಿಡದೆ, 'ನೀವು ತುಂಬಾ ದಪ್ಪಗಿದ್ದೀರಾ (ಯುವರ್ ಟೂ ಫ್ಯಾಟ್)’ ಎಂದು ಸ್ಥೂಲಕಾಯವಿದ್ದ ಕಾರಣಕ್ಕೆ ಅಪಮಾನ ಎಸಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ವಿರುದ್ಧ ಸಂತ್ರಸ್ತೆ ಜುಲಿಯಾನಾ ನೆಹ್ಮಿ ಬ್ರೆಝಿಲ್ ನ್ಯಾಯಾಲಯದ ಮೊರೆ ಹೋಗಿದ್ದರು.
ಸಂತ್ರಸ್ತ ಮಹಿಳೆ ಜೂಲಿಯಾನ ತನ್ನ ಕುಟುಂಬ ಸಮೇತ ಲೆಬನಾನ್‌ನಲ್ಲಿ ಪ್ರವಾಸಕ್ಕೆ ಬಂದಿದ್ದಳು. ಏರ್ ಫ್ರಾನ್ಸ್ ಮೂಲಕ ವಿದೇಶಕ್ಕೆ ಬಂದಿದ್ದ ಮಹಿಳೆ, ಪುನಃ ಬ್ರೆಜಿಲ್‌ಗೆ ಹಿಂದಿರುಗಲು ಮುಂದಾದಾಗ ಕತಾರ್ ಏರ್‌ವೇಸ್ ಸಿಬ್ಬಂದಿ, ʻನೀವು ತುಂಬಾ ದಪ್ಪಗಿದ್ದೀರಾʼ ಎಂದು ಹೇಳಿ ಆಕೆಯನ್ನು ತಡೆದಿದ್ದಾರೆ. ಅಲ್ಲದೇ ತಾನು ಟಿಕೆಟ್‌ಗಾಗಿ ಪಾವತಿಸಿದ್ದ 1 ಸಾವಿರ ಡಾಲರ್ (82 ಸಾವಿರ ರೂಪಾಯಿ) ಹಣವನ್ನೂ ಮರುಪಾವತಿಸಲು ನಿರಾಕರಿಸಿ, ಬದಲಿಗೆ 3 ಸಾವಿರ ಡಾಲರ್ (2.47 ಲಕ್ಷ ರೂ.) ನೀಡಿ ದೊಡ್ಡ ಆಸನ ಇರುವ ಬಿಸಿನೆಸ್ ಟಿಕೆಟ್ ಖರೀದಿಸುವಂತೆ ಮಹಿಳೆಗೆ ಒತ್ತಡ ಹಾಕಿದ್ದಾರೆ.
ಇದರಿಂದ ಅವಮಾನಗೊಂಡ ಜುಲಿಯಾನಾ, ವಿಮಾನದ ಸಿಬ್ಬಂದಿಯ ವರ್ತನೆಯಿಂದ ಮಾನಸಿಕ ಯಾತನೆಗೆ ಒಳಗಾಗಿದ್ದೇನೆ, ಸಂಸ್ಥೆ ನನ್ನ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಜುಲಿಯಾನಾಳ ದೂರನ್ನು ಪರಿಗಣಿಸಿದ ಬ್ರೆಜಿಲ್ ನ್ಯಾಯಾಲಯದ ನ್ಯಾಯಮೂರ್ತಿ ರೆನಾಟ ಮಾರ್ಟಿನ್ಸ್ ಡಿ ಕರ್ವಾಲ್ಹೊ, ವಾರಕ್ಕೊಂದು ಅಥವಾ ಎರಡರಂತೆ ಮಾನಸಿಕ ಪುನಶ್ಚೇತನ ಚಿಕಿತ್ಸೆಯನ್ನು ಕೊಡಿಸುವಂತೆ ವಿಮಾನಯಾನ ಸಂಸ್ಥೆಗೆ ಸೂಚನೆ ನೀಡಿದೆ.
ಪ್ರಸ್ತುತ ಮಹಿಳೆ ಪಡೆಯುತ್ತಿದ್ದ ಚಿಕಿತ್ಸೆ ವೆಚ್ಚ ದುಬಾರಿಯಾಗಿದ್ದು, ಪ್ರತಿ ಚಿಕಿತ್ಸೆಗೆ 400 ರಿಯಾಸ್ (6,389 ರೂ.) ತಗುಲುತ್ತದೆ. ಹಾಗೆಯೇ 1 ವರ್ಷದಲ್ಲಿ 19,200 ರಿಯಾಸ್ (3.07 ಲಕ್ಷ) ವೆಚ್ಚ ತಗುಲಲಿದೆ.