ಜನವರಿಯಲ್ಲಿ ಉಡುಪಿಯಲ್ಲಿ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ: ಸಚಿವ ಸುನಿಲ್ ಕುಮಾರ್
ಉಡುಪಿ (Headlines Kannada): ಜನವರಿ ತಿಂಗಳಲ್ಲಿ ಉಡುಪಿಯಲ್ಲಿ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಆಯೋಜಿಸಲಾಗುವುದು ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಯಕ್ಷ ಶಿಕ್ಷಣ ಟ್ರಸ್ಟ್ ನ ವತಿಯಿಂದ ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ನಡೆದ ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಲೆಗಳಲ್ಲಿಯೂ ಯಕ್ಷ ಶಿಕ್ಷಣ ಟ್ರಸ್ಟ್ ಜತೆಗೂಡಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಚಿಂತನೆ ಮಾಡಲಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯಕ್ಷ ಶಿಕ್ಷಣ ಟ್ರಸ್ಟ್ ಗೆ 10ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು.
ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಸ್ವಾಮೀಜಿ ಮಾತನಾಡಿ, ಕಲೆಯನ್ನು ಬಲ್ಲವರು ಸುಸಂಸ್ಕೃತರಾಗುತ್ತಾರೆ. ಕಲೆ ಕಲಾವಿದರಿಗೆ, ಸಮಾಜಕ್ಕೆ ಉತ್ತಮ ಸಂಸ್ಕಾರ ನೀಡುತ್ತದೆ. ಯಕ್ಷಗಾನವೂ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುತ್ತದೆ ಎಂದರು.
ಈ ಸಂದರ್ಭದಲ್ಲಿ ಸಾಧಕ ಶಾಲೆ - ಸಾಧಕ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ನಿ. ಬಿ. ವಿಜಯ ಬಲ್ಲಾಳ್, ಪಣಂಬೂರ್ ವಾಸುದೇವ ಐತಾಳ್, ಪುತ್ತೂರು ಪ್ರವೀಣ್ ಶೆಟ್ಟಿ, ಡಯಟ್ ಪ್ರಾಂಶುಪಾಲ ಅಶೋಕ್ ಕಾಮತ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಹೆಚ್. ಚಂದ್ರೇಗೌಡ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್ ಕೆ, ಶಿಕ್ಷಣಾಧಿಕಾರಿ ಜಾಹ್ನವಿ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ ಗಂಗಾಧರ ರಾವ್, ಯಕ್ಷ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಟ್ರಸ್ಟಿಗಳಾದ ಮೀನಾ ಲಕ್ಷ್ಮಣಿ ಅಡ್ಯಂತಾಯ ಉಪಸ್ಥಿತರಿದ್ದರು.