ಕಾರ್ಕಳದಲ್ಲಿ ಅವಕಾಶ ಕೊಟ್ಟು ನೋಡಿ, ಹಿಂದುತ್ವ ಎಂದರೇನೆಂದನ್ನು ನಾನು ಸಾಬೀತುಪಡಿಸುವೆ: ಸುನಿಲ್ ಕುಮಾರ್'ಗೆ ಸವಾಲು ಹಾಕಿದ ಮುತಾಲಿಕ್
ಕಾರ್ಕಳ(Headlines Kannada): ಸಚಿವ ಸುನಿಲ್ ಕುಮಾರ್ ವಿರುದ್ಧ ತೊಡೆತಟ್ಟಿರುವ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್, ನಿಮ್ಮಲ್ಲಿ ನಿಜವಾಗಿ ಹಿಂದುತ್ವ, ಆರ್‌ಎಸ್‌ಎಸ್ ನಿಷ್ಠೆ ಇದ್ದರೆ ಕ್ಷೇತ್ರ ನಂಗಾಗಿ ತ್ಯಾಗ ಮಾಡಿ” ಎಂದು ಸವಾಲು ಹಾಕಿದ್ದಾರೆ.
ಕಾರ್ಕಳದಲ್ಲಿ ಮಾತನಾಡಿದ ಅವರು, ನನಗೊಮ್ಮೆ ಕಾರ್ಕಳದಲ್ಲಿ ಶಾಸಕನಾಗುವ ಅವಕಾಶ ಕೊಟ್ಟು ನೋಡಿ, ಹಿಂದುತ್ವ ಎಂದರೇನೆಂದನ್ನು ನಾನು ಸಾಬೀತು ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮಸೇನೆ ಸ್ಪರ್ಧಿಸಲಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿರುವ ಪ್ರಮೋದ್ ಮುತಾಲಿಕ್, 25 ಕ್ಷೇತ್ರಗಳಲ್ಲಿ ಪ್ರಖರ ಹಿಂದೂವಾದಿಗಳಿಗೆ ಟಿಕೆಟ್ ನೀಡುವುದಾಗಿ ಘೋಷಿಸಿದ್ದರು. ಸುನಿಲ್ ಕುಮಾರ ಅವರಿಗೆ ಸವಾಲು ಹಾಕಿರುವುದನ್ನು ನೋಡಿದರೆ ಈ ಬಾರಿ ಅವರು ಕಾರ್ಕಳದಲ್ಲಿ ಸ್ಪರ್ಧಿಸುತ್ತಾರಾ ಎಂಬ ಚರ್ಚೆ ಶುರುವಾಗಿದೆ.
ನಾನು ಕಾರ್ಕಳದಿಂದ ಈ ಬಾರಿ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಹೇಳಿದಾಗಿನಿಂದ ನನ್ನ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಹಿಂದುತ್ವಕ್ಕಾಗಿ ನಾನು ಈಗಾಗಲೇ ಸಾಕಷ್ಟು ಆರೋಪಗಳನ್ನು ಎದುರಿಸಿದ್ದೇನೆ, ಸಂಕಷ್ಟ ಅನುಭವಿಸಿದ್ದೇನೆ. ನನ್ನ ಮುಖಕ್ಕೆ ಮಸಿ ಬಳಿಸಿಕೊಂಡಿದ್ದೇನೆ, ಅದಕ್ಕೆಲ್ಲ ಈ ಬಾರಿಯ ಚುನಾವಣೆಯಲ್ಲಿ ಉತ್ತರ ನೀಡುತ್ತೇನೆ. RSS ನನಗೆ ರಾಷ್ಟ್ರಪ್ರೇಮ, ಹಿಂದುತ್ವದ ರಕ್ಷಣೆಯ ಪಾಠವನ್ನು ಕಲಿಸಿದೆ ಎಂದು ಹೇಳಿದರು.
ಪ್ರಮೋದ್ ಮುತಾಲಿಕ್ ಹಿಂದುತ್ವ ಹಾಗು ನಿಮ್ಮ ಹಿಂದುತ್ವ ಒಂದೇ ತಕ್ಕಡಿಯಲ್ಲಿ ಇಟ್ಟು ಇಡೋಣ. ಯಾರು ಹಿಂದುತ್ವಕ್ಕೋಸ್ಕರ ಇದ್ದಾರೆ ಅನ್ನೋದನ್ನ ಜನರ ಮುಂದೆ ಇಡೋಣ ಎಂದು ಸವಾಲು ಹಾಕಿದ ಮುತಾಲಿಕ್, ʻಹಿಂದುಗಳ ನೋವಿಗೆ ನಾನು ಧ್ವನಿಯಾಗಲು ಕಾರ್ಕಳಕ್ಕೆ ಬಂದಿದ್ದೇನೆ. ಇದರಿಂದ ನನಗೆ ಹಣ, ಆಸ್ತಿ ಮಾಡುವ ಉದ್ದೇಶವಿಲ್ಲ, ಆದ್ದರಿಂದ ಈ ಬಾರಿ ಗುರುವಿಗಾಗಿ ಕ್ಷೇತ್ರ ತ್ಯಾಗ ಮಾಡಿʼʼ ಎಂದರು.