
ಉಡುಪಿಯಲ್ಲಿ 15ಕ್ಕೂ ಹೆಚ್ಚು ಗೂಡಾಂಗಡಿ, ತಳ್ಳುಗಾಡಿಗಳನ್ನು ತೆರವುಗೊಳಿಸಿದ ನಗರಸಭೆ ಅಧಿಕಾರಿಗಳು; ಬೀದಿಬದಿ ವ್ಯಾಪಾರಿಗಳ ಆಕ್ರೋಶ
ಉಡುಪಿ(Headlines Kannada): ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದ್ದ 15ಕ್ಕೂ ಅಧಿಕ ಗೂಡಾಂಗಡಿ, ತಳ್ಳುಗಾಡಿಗಳನ್ನು ಅಧಿಕಾರಿಗಳು ಕಾರ್ಯಾಚರಣೆ ಮೂಲಕ ತೆರವುಗೊಳಿಸಿದ್ದಾರೆ.
ರಸ್ತೆ ಬದಿಯಲ್ಲಿರುವ ಗೂಡಾಂಗಡಿ, ಬೀದಿಬದಿ ವ್ಯಾಪಾರಿಗಳಿಂದ ನಡೆದಾಡಲು ಹಾಗೂ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಂದು ಮಿಂಚಿನ ಕಾರ್ಯಾಚರಣೆ ನಡೆಸಿದರು. ನಗರಸಭೆ ಆರೋಗ್ಯ ಅಧಿಕಾರಿ ಕರುಣಾಕರ ಅವರ ನೇತೃತ್ವದಲ್ಲಿ ಪೊಲೀಸ್ ಭದ್ರತೆಯಲ್ಲಿ 15ಕ್ಕೂ ಅಧಿಕ ತಳ್ಳುಗಾಡಿ , ಗೂಡಂಗಡಿಗಳನ್ನು ತೆರವು ಮಾಡಲಾಯಿತು.
ಅಧಿಕಾರಿಗಳ ದಿಢೀರ್ ಕಾರ್ಯಾಚರಣೆಗೆ ಆಕ್ರೋಶ:
ಅಧಿಕಾರಿಗಳ ಕಾರ್ಯಾಚರಣೆ ವಿರುದ್ಧ ಬೀದಿಬದಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಮಾಹಿತಿ ನೀಡದೇ ಏಕಾಏಕಿ ಬಂದು ನಮ್ಮ ಹಣ್ಣುಗಳನ್ನು ಕಸದ ರೀತಿಯಲ್ಲಿ ಕೊಂಡು ಹೋಗಿದ್ದಾರೆ. 30 ರಿಂದ 50 ಸಾವಿರ ರೂ. ಹಣ್ಣುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೆ ನಗರ ಸಭೆಯ ಡ್ರೈವರ್ ಕೂಡಾ ಹಲ್ಲೆ ಮಾಡಿದ್ದಾರೆ ಎಂದು ಬೀದಿ ಬದಿ ವ್ಯಾಪಾರಿ ಬಸವ ರೆಡ್ಡಿ ಆರೋಪಿಸಿದರು.
ನಮ್ಮ ಹಣ್ಣುಗಳನ್ನು ವಾಪಾಸು ನೀಡಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.