
ಅಭಿವೃದ್ಧಿ ಕಾರ್ಯ ಮಾಡುವ ಅರ್ಹತೆ, ಯೋಗ್ಯತೆ ಇಲ್ಲದಿರುವ ಬಿಜೆಪಿ ಕೇವಲ ಜಾತಿ, ಧರ್ಮ ಆಧಾರದಲ್ಲಿ ವಿಭಜನೆ ಮಾಡುತ್ತಿದೆ: ನಳಿನ್ ಹೇಳಿಕೆಗೆ ಖಾದರ್ ಆಕ್ರೋಶ
ಮಂಗಳೂರು(Headlines Kannada): ರಸ್ತೆ, ಗುಂಡಿ ಸೇರಿದಂತೆ ಅಭಿವೃದ್ಧಿ ಕಾರ್ಯ ಮಾಡುವ ಅರ್ಹತೆ, ಯೋಗ್ಯತೆ ಇವರಿಗೆ ಇಲ್ಲ, ಇವರಿಗೇನಿದ್ದರೂ ಜಾತಿ, ಧರ್ಮ ಆಧಾರದಲ್ಲಿ ವಿಭಜನೆ ಮಾಡಿ ಜನರ ಕಂದಕ ಸೃಷ್ಟಿಸುವುದಷ್ಟೇ ಗೊತ್ತು ಎಂದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಆಕ್ರೋಶ ಹೊರಹಾಕಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಖಾದರ್, ಬಿಜೆಪಿ ಅವರು ಅಧಿಕಾರಕ್ಕೆ ಬಂದ ಮೇಲೆ ಏನೆಲ್ಲ ಮಾಡುತ್ತೇನೆ ಹೇಳಿದ್ದಾರೋ ಅದನ್ಯಾವುದನ್ನು ಮಾಡದೆ ಕೇವಲ ಧರ್ಮ, ಜಾತಿ ಆಧಾರದಲ್ಲಿ ಜನರ ಮನಸ್ಸು ಕೆಡಿಸುತ್ತಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಗೆ ಕುಚಲಕ್ಕಿ ತರಲು ಯೋಗ್ಯತೆ ಇಲ್ಲದ ಇವರು ಜನಪ್ರತಿನಿಧಿಗಳಾ? ಇವರಿಗೆ ಅಭಿವೃದ್ಧಿ ಮಾಡುವ ಯೋಗ್ಯತೆ ಇಲ್ಲ ಅಂತ ಜನರಿಗೆ ಬಿಜೆಪಿ ಹೇಳಿಕೆಯಿಂದಲೇ ಗೊತ್ತಾಗುತ್ತಿದೆ. ಈಗೀಗ ಕೇವಲ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದ ಖಾದರ್, ಡಬಲ್ ಇಂಜಿನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯ ಬಿಜೆಪಿ ಸರ್ಕಾರ ಆರ್ಥಿಕವಾಗಿ ದಾರಿದ್ರ್ಯದ ಪರಿಸ್ಥಿತಿಗೆ ಬಂದಿದೆ. ಅಬ್ಬಕ್ಕ ಉತ್ಸವಕ್ಕೆ ಪ್ರತಿವರ್ಷ ಸರಕಾರ 50 ಲಕ್ಷ ರೂ. ಬಿಡುಗಡೆ ಮಾಡುತ್ತಿತ್ತು. ಆದರೆ ಈ ಸಲ ಕರಾವಳಿಯವರೇ ಆದ ಕನ್ನಡ, ಸಂಸ್ಕೃತಿ ಸಚಿವರಾದ ಸುನೀಲ್ ಕುಮಾರ್, ಬರೀ ಹತ್ತು ಲಕ್ಷ ರೂ ಕೊಟ್ಟಿದ್ದಾರೆ. ಇದು ದೇಶಕ್ಕಾಗಿ ತ್ಯಾಗ ಮಾಡಿದ ವೀರರಾಣಿ ಅಬ್ಬಕ್ಕನಿಗೆ ಮಾಡಿದ ಅ#ವಮಾನ ಎಂದು ಖಾದರ್ ಕಿಡಿಕಾರಿದರು.