ಹಿಜಾಬ್ ನಿಷೇಧ ಪ್ರಕರಣ; ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠದ ಎದುರು ಶೀಘ್ರದಲ್ಲೇ ವಿಚಾರಣೆ

ಹಿಜಾಬ್ ನಿಷೇಧ ಪ್ರಕರಣ; ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠದ ಎದುರು ಶೀಘ್ರದಲ್ಲೇ ವಿಚಾರಣೆ

ಹೊಸದಿಲ್ಲಿ(Headlines Kannada): ಇತ್ತೀಚಿಗೆ ಹಿಜಾಬ್ ನಿಷೇಧ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳಿಂದ ಭಿನ್ನ ತೀರ್ಪು ಪ್ರಕಟವಾಗಿರುವ ಕಾರಣಕ್ಕಾಗಿ ಈ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಮೂವರು ನ್ಯಾಯಮೂರ್ತಿಗಳ ಪೀಠ ರಚನೆ ಮಾಡಿದೆ. 

ಹೆಣ್ಣುಮಕ್ಕಳ ಹಿಜಾಬ್ ನಿಷೇಧದ ಕುರಿತಾಗಿ ವಿಚಾರಣೆ ನಡೆಸಿ 2022ರ ಅಕ್ಟೋಬರ್ 13 ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ಭಿನ್ನ ನಿಲುವನ್ನು ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದ್ದು ವಿಚಾರಣೆಗೆ ತ್ರಿಸದಸ್ಯ ಪೀಠವನ್ನು ಸ್ಥಾಪಿಸಲು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಫೆಬ್ರವರಿ 6 ರಿಂದ ಕರ್ನಾಟಕದಲ್ಲಿ ಕೆಲವು ತರಗತಿಗಳಿಗೆ ನಿಗದಿಯಾಗಿರುವ ಪ್ರಾಯೋಗಿಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಮಧ್ಯಂತರ ಆದೇಶದ ಅಗತ್ಯವಿದೆ ಎಂದು ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಕೋರ್ಟ್ ಮುಂದಿಟ್ಟಿದ್ದರು. ಅವರ ಸಲ್ಲಿಕೆಗಳನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹಾಗು ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಜೆಬಿ ಪಾರ್ದಿವಾಲಾ ಅವರನ್ನೊಳಗೊಂಡ ಪೀಠವು ಗಮನಿಸಿದೆ. 

ಹಿಜಾಬ್ ನಿಷೇಧದ ಕುರಿತಾಗಿ ಮಾತನಾಡಿರುವ ವಕೀಲರು, ಇದು ಮುಸ್ಲಿಂ ವಿದ್ಯಾರ್ಥಿನಿಯರು ತಲೆಗೆ ಧರಿಸುವ ಸ್ಕಾರ್ಫ್ ಬಟ್ಟೆಯ ವಿಚಾರವಾಗಿದೆ. ವಿದ್ಯಾರ್ಥಿಗಳಿಗೆ ಫೆಬ್ರವರಿ 6ರಿಂದ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿದ್ದು,  ಅಷ್ಟರೊಳಗೆ ಮಧ್ಯಂತರ ಆದೇಶ ನೀಡಿದರೆ ಅವರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಅದಕ್ಕೆ ಮುಖ್ಯ ನ್ಯಾಯಮೂರ್ತಿಗಳು ಪ್ರತಿಕ್ರಿಯೆ ನೀಡಿದ್ದು, "ನಾನು ಈ ಬಗ್ಗೆ ಪರಿಶೀಲಿಸುತ್ತೇನೆ. ಇದು ತ್ರಿಸದಸ್ಯ ಪೀಠದ ವಿಷಯವಾಗಿದ್ದು, ವಿಚಾರಣೆಗೆ ದಿನಾಂಕವನ್ನು ನಿಗದಿಪಡಿಸುತ್ತೇವೆ" ಎಂದು ಹೇಳಿದರು. 

Ads on article

Advertise in articles 1

advertising articles 2

Advertise under the article