ಉತ್ತರ ಪ್ರದೇಶದ ಅಲೀಘರ್ನಲ್ಲಿ ಅದ್ದೂರಿಯಾಗಿ ನಡೆದ ನಾಯಿಗಳ ಮದುವೆ! ಮದುವೆ ಹೇಗಿತ್ತು ನೋಡಿ...ಇಲ್ಲಿದೆ ವೀಡಿಯೋ!
ಅಲೀಘರ್(Headlineskannada): ದೇಶದಲ್ಲಿ ಏನೆಲ್ಲ ವಿಚಿತ್ರ ಘಟನೆಗಳು ನಡೆಯುತ್ತಿರುವ ಮಧ್ಯೆ ಭಾರತೀಯ ವಿವಾಹ ಪದ್ಧತಿಯಡಿ ನಾಯಿಗಳ ಮದುವೆಯೊಂದು ನಡೆದಿದ್ದು, ಈ ವೀಡಿಯೊ ಈಗ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಅಲೀಘರ್ನಲ್ಲಿ. ತಮ್ಮ ಮುದ್ದಿನ ಸಾಕುನಾಯಿಗೆ ನೆರೆಮನೆಯ ನಾಯಿಯೊಂದಿಗೆ ಭಾರತೀಯ ವಿವಾಹ ಪದ್ಧತಿಯಡಿ ಮದುವೆ ಮಾಡಿದ್ಧಾರೆ. ಅಲೀಘರ್ನ ಸುಖ್ರಾವಲಿ ಗ್ರಾಮದ ದಿನೇಶ್ ಚೌಧರಿಯವರ ಸಾಕುನಾಯಿ 'ಟಾಮಿ' ವರನಾದರೆ, ಅತ್ರೌಲಿಯ ಟಿಕ್ರಿ ರಾಯ್ಪುರದ ಡಾ.ರಾಮ್ಪ್ರಕಾಶ್ ಸಿಂಗ್ ಅವರ 7 ತಿಂಗಳ ಹೆಣ್ಣುನಾಯಿ 'ಜೈಲಿ' ವಧುವಾಗಿದ್ದು, ಮನೆಯವರ ಸಮ್ಮುಖದಲ್ಲಿ ಸಂಭ್ರಮದ ಮದುವೆ ಕಾರ್ಯ ನಡೆಯಿತು.
ಮೊನ್ನೆ ನಡೆದ ಮಕರ ಸಂಕ್ರಾಂತಿಯ ದಿನ ಟಾಮಿ ಹಾಗು ಜೈಲಿ ಎಂಬ ನಾಯಿಗಳ ವಿವಾಹ ನೆರವೇರಿದೆ. ರಾಯಪುರದಿಂದ ವಧು ಜೈಲಿಯೊಂದಿಗೆ ಆಕೆಯನ್ನು ಪೋಷಕರು, ಸಂಬಂಧಿಕರು, ಆಪ್ತರು ಸುಖ್ರಾವಲಿಗೆ ಬಂದಿಳಿದಿದ್ದು, ಜೈಲಿಯನ್ನು ವರ ಟಾಮಿಯ ಕುಟುಂಬದವರು ತಿಲಕ, ಆರತಿಯೊಂದಿಗೆ ಮದುವೆ ಮನೆಗೆ ಬರಮಾಡಿಕೊಂಡರು. ನಂತರ ನಡೆದ ಮದುವೆ ಕಾರ್ಯಕ್ರಮದಲ್ಲಿ ಟಾಮಿ ಮತ್ತು ಜೈಲಿ ಮಂಟಪದಲ್ಲಿ ಕುಳಿತು ಪರಸ್ಪರ ಹಾರವನ್ನು ಬದಲಾಯಿಸಿಕೊಳ್ಳಲು ಪೋಷಕರು ಸಹಾಯ ಮಾಡಿದರು.
ಈ ನಾಯಿಗಳ ಮದುವೆಗೆ ಸೇರಿದ ಮಂದಿಯೆಲ್ಲ ಸಂಗೀತ, ನೃತ್ಯವನ್ನೆಲ್ಲ ಮಾಡುವ ಮೂಲಕ ಖುಷಿಯಿಂದ ಪಾಲ್ಗೊಂಡರು. ಮದುವೆಯಲ್ಲಿ ಭಾಗವಹಿಸಿದವರಿಗೆ ಹಾಗು ಅಕ್ಕಪಕ್ಕದ ನಾಯಿಗಳಿಗೂ ತುಪ್ಪದಲ್ಲಿ ತಯಾರಿಸಲಾದ ಖಾದ್ಯಗಳನ್ನು ಬಡಿಸಲಾಯಿತು. ಈ ನಾಯಿಗಳ ಮದುವೆಗೆ ಸುಮಾರು 40ರಿಂದ 50 ಸಾವಿರ ಹಣ ಖರ್ಚಾಗಿದೆ ಎಂದು ಟಾಮಿಯ ಪೋಷಕ ದಿನೇಶ್ ತಿಳಸಿದ್ದಾರೆ.